ಹಾಸನ: ವಯಸ್ಸಾದ ತಾಯಿ ಮನೆಯಲ್ಲಿ ಗಲೀಜು ಮಾಡುತ್ತಾಳೆ, ರಾತ್ರಿ ಹೊತ್ತು ಮನೆ ಮಂದಿಯ ನೆಮ್ಮದಿಗೆ ಭಂಗ ತರುತ್ತಾಳೆ ಅನ್ನೋ ಒಂದೇ ಕಾರಣಕ್ಕೆ ಹೆತ್ತ ಮಗ ಹಾಗೂ ಸೊಸೆ ಸೇರಿ ವಯೋವೃದ್ಧೆಯನ್ನು ಮನೆಯಿಂದ ಹೊರಗೆ ಚೈನ್ ನಲ್ಲಿ ಕಟ್ಟಿ ಹಾಕುತ್ತಿದ್ದ ಅಮಾನವೀಯ ಘಟನೆ ಹಾಸನ ಜಿಲ್ಲೆ ಬೇಲೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಶೇಷಮ್ಮ(78) ಜನ್ಮ ಕೊಟ್ಟ ಮಗನಿಂದ ಹೊರಬಿದ್ದಿದ್ದ ನತದೃಷ್ಟ ತಾಯಿ. ಬೇಲೂರಿನ ತಹಸೀಲ್ದಾರ್ ಕಚೇರಿ ಹಿಂಭಾಗದಲ್ಲಿರುವ ಮನೆಯ ಹೊರಗಿನ ಆರ್‍ಸಿಸಿ ಮೆಟ್ಟಿಲಿಗೆ ಸರಪಳಿ ಕಟ್ಟಿ ನಿತ್ಯವೂ ಶೇಷಮ್ಮನನ್ನು ರಾತ್ರಿ ವೇಳೆ ಮನೆಯಿಂದ ಹೊರ ಹಾಕುತ್ತಿದ್ದರು.
Advertisement
Advertisement
ಮಗ, ಸೊಸೆ ಹಾಗೂ ಮೊಮ್ಮಕ್ಕಳ ನಿರ್ದಯಿ ನಡೆಯಿಂದಾಗಿ ಅಬಲೆ ಶೇಷಮ್ಮ, ಎಷ್ಟೋ ರಾತ್ರಿಗಳನ್ನು ಕೊರೆವ ಚಳಿಯಲ್ಲೇ ನಡುಗುತ್ತಾ ಕಳೆದಿದ್ದಾಳೆ. ಹಸಿವಾಗಲೀ, ನೀರಡಿಕೆಯಾಗಲೀ ಯಾರೂ ಕೇಳೋರು ಇರಲಿಲ್ಲ. ಈ ಕರುಣಾಜನಕ ದೃಶ್ಯವನ್ನು ನೆರೆ ಹೊರೆಯವರು ಕಂಡರೂ, ಮಗ-ಸೊಸೆ ಜಗಳಕ್ಕೆ ಬರುತ್ತಾರೆ ಅನ್ನೋ ಕಾರಣಕ್ಕೆ ಕಂಡೂ ಕಾಣದಂತೆ ಸುಮ್ಮನಿದ್ದರು. ಆದರೂ ಅಸಹಾಯಕ ಶೇಷಮ್ಮಳ ಅಳಲನ್ನು ಸಹಿಸಲಾಗದ ಕೆಲವರು, ಸ್ಥಳೀಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.
Advertisement
Advertisement
ಕೂಡಲೇ ಸ್ಪಂದಿಸಿದ ಬೇಲೂರು ಪಿಎಸ್‍ಐ ಜಗದೀಶ್ ಹಾಗೂ ಸಿಬ್ಬಂದಿ ಶೇಷಮ್ಮಳ ಮಗ ಕುಮಾರ್ ಹಾಗೂ ಸೊಸೆಯನ್ನು ಕರೆಸಿ ಪ್ರಶ್ನಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಶೇಷಮ್ಮಳನ್ನು ಕಟ್ಟಿಹಾಕಿದ್ದ ಸರಪಳಿ ಅಲ್ಲೇ ಇದ್ದಿದ್ದು ಪತ್ತೆಯಾಗಿದೆ. ಈ ರೀತಿಯ ವರ್ತನೆ ಮರುಕಳಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರ ಸ್ಪಂದನೆಯಿಂದ ಶೇಷಮ್ಮ ಮರಳಿ ಮನೆ ಸೇರಿದ್ದಾಳೆ. ಆದರೆ ಮುಂದೇನಾಗುವುದೋ ಎಂಬ ಆತಂಕ ಅಬಲ ಅಜ್ಜಿಯನ್ನು ಕಾಡುತ್ತಲೇ ಇದೆ. ಇಳಿ ವಯಸ್ಸಿನಲ್ಲಿ ಮಕ್ಕಳು ನಮ್ಮನ್ನು ಸಾಕುತ್ತಾರೆ ಎಂದು ಎಷ್ಟೋ ತಂದೆ-ತಾಯಿ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಬೇಲೂರಿನ ಶೇಷಮ್ಮಳ ಈ ಸ್ಥಿತಿ ಕಂಡವರು ಇಂಥ ಮಕ್ಕಳು ಬೇಕಾ ಅಂತ ಹಿಡಿಶಾಪ ಹಾಕುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews