ಬೆಂಗಳೂರು: ಬಿಜೆಪಿಯವರು ಬಲತ್ಕಾರವಾಗಿ ಥಿಯೇಟರ್‌ಗಳಿಂದ `ಜೇಮ್ಸ್’ ಸಿನಿಮಾ ತೆಗೆಸಲು ಮುಂದಾಗಿದ್ದಾರೆ. ಈ ಕುರಿತು ಚಿತ್ರದ ನಿರ್ಮಾಪಕರೇ ನನ್ನ ಬಳಿ ನೋವು ತೋಡಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ವಿಧಾನಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ನಿನ್ನೆ ರಾತ್ರಿ ಜೇಮ್ಸ್ ಚಿತ್ರದ ನಿರ್ಮಾಪಕರು ನನ್ನನ್ನು ಭೇಟಿಯಾಗಿದ್ದರು. ಅನೇಕ ಕಡೆಗಳಲ್ಲಿ ಬಿಜೆಪಿ ಶಾಸಕರು `ಜೇಮ್ಸ್’ ಚಿತ್ರ ನಡೆಯುತ್ತಿರುವ ಥಿಯೇಟರ್‌ನಲ್ಲಿ ಶೋ ನಿಲ್ಲಿಸಲು ಒತ್ತಡ ಹಾಕುತ್ತಿದ್ದಾರೆ. ದಿ ಕಾಶ್ಮೀರ್ ಫೈಲ್ ಚಿತ್ರಕ್ಕಾಗಿ ಒತ್ತಡ ಮಾಡುತ್ತಿದಾರೆ ಎಂದು ನಿರ್ಮಾಪಕರು ನನ್ನ ಬಳಿ ನೋವು ತೋಡಿಕೊಂಡರು ಎಂದು ತಿಳಿಸಿದರು. ಇದನ್ನೂ ಓದಿ: ಈ ವಾರ ಕರ್ನಾಟಕದಲ್ಲೇ 250ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ‘ಆರ್.ಆರ್.ಆರ್’: ಪುನೀತ್ ‘ಜೇಮ್ಸ್’ ಏನಾಗತ್ತೆ?
ನಿರ್ಮಾಪಕರು ಮೊದಲೇ ಅಡ್ವಾನ್ಸ್ ಕೊಟ್ಟಿರುತ್ತಾರೆ. ಬಿಜೆಪಿಯವರು ಬಲಾತ್ಕಾರದಿಂದ ಜೇಮ್ಸ್ ಚಿತ್ರ ತೆಗೆಸುವುದು ದೌರ್ಜನ್ಯ. ಪುನಿತ್ ರಾಜ್‌ಕುಮಾರ್ ಅಭಿಮಾನಿಗಳು ಆಸಕ್ತಿಯಿಂದ ಇದ್ದಾರೆ. ಅಂತಹ ಸಂದರ್ಭದಲ್ಲಿ ಬಲಾತ್ಕಾರದಿಂದ ಸಿನಿಮಾ ತಗೆಸುವುದು ಸರಿಯಲ್ಲ. ನಾನು ಬಿಜೆಪಿ ಶಾಸಕರಿಗೂ ಹೇಳುತ್ತೇನೆ. ಬಿಜೆಪಿಯವರು ಸಜ್ಜನರ ಥರ ಆಡ್ತಾರೆ. ಯಾರನ್ನೂ ಸಿನಿಮಾ ನೋಡಬೇಡಿ ಅನ್ನೋದಿಲ್ಲ. ಯಾರಿಗೆ ಇಷ್ಟ ಇದೆಯೋ ನೋಡಲಿ. ಆದರೆ ದೌರ್ಜನ್ಯ ಮಾಡಬಾರದು. ಜೇಮ್ಸ್ಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮುಸ್ಲಿಂ ಮಳಿಗೆಗಳಿಗೆ ದೇವಸ್ಥಾನ ಅಕ್ಕಪಕ್ಕ ಹಾಗೂ ಜಾತ್ರೆಗಳಲ್ಲಿ ಅವಕಾಶ ನಿಷೇಧ ವಿಚಾರವಾಗಿ ಮಾತನಾಡಿ, ಈ ರೀತಿ ಅವಕಾಶ ನಿರಾಕರಣೆ, ಮಳಿಗೆ ನೀಡದೇ ಇರುವುದು, ಅಂಗಡಿ ಟೆಂಡರ್ ನಿರಾಕರಿಸುವುದು ತಪ್ಪು. ನಮ್ಮ ದೇಶದಲ್ಲಿ ಮುಕ್ತ ವ್ಯಾಪಾರಕ್ಕೆ ಅವಕಾಶ ಇದೆ. ಈ ರೀತಿ ಅವಕಾಶ ನಿರಾಕರಣೆ ಮಾಡುವುದು ದೌರ್ಜನ್ಯ. ಇದು ಮೂಲಭೂತ ಹಕ್ಕನ್ನು ಹತ್ತಿಕ್ಕುವ ಕೆಲಸ. ಇದು ಸಂಪೂರ್ಣ ಕಾನೂನು ಬಾಹಿರವಾದದ್ದು ಎಂದು ಅವಕಾಶ ನಿರಾಕರಿಸಿದ ಹಿಂದೂಪರ ಸಂಘಟನೆಗಳ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ