ಹಂಪಿ ಉತ್ಸವಕ್ಕೆ ಸರ್ಕಾರದ ಬಳಿ ದುಡ್ಡು ಇಲ್ಲದಿದ್ದರೆ ಭಿಕ್ಷೆ ಬೇಡಿಯಾದ್ರೂ ಹಣ ಹೊಂದಿಸಿಕೊಡುತ್ತೇವೆ- ಸೋಮಶೇಖರ್ ರೆಡ್ಡಿ

Public TV
1 Min Read
BLY reddy press meet 2

ಬಳ್ಳಾರಿ: ಹಂಪಿ ಉತ್ಸವ ನಡೆಸಲು ಸರ್ಕಾರದ ಬಳಿ ಹಣ ಇಲ್ಲದಿದ್ದರೆ ನಾವೂ ಭಿಕ್ಷೆ ಬೇಡಿ ಹಣ ಹೊಂದಿಸಿಕೊಡುತ್ತೇವೆ ಎಂದು ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ದೋಸ್ತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಹಂಪಿ ಉತ್ಸವ ನಡೆಸಲು ಮುಂದಾಗಬೇಕು. ಹಂಪಿ ಉತ್ಸವ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವ ಎಲ್ಲ ಸಂಘಟನೆಗಳ ಬೆಂಬಲಕ್ಕೆ ಬಿಜೆಪಿ ನಿಲ್ಲಲಿದೆ. ಹಂಪಿ ಒಂದು ಐತಿಹಾಸಿಕ ತಾಣ. ಹಂಪಿ ಉತ್ಸವ ನಮ್ಮ ನಾಡಿನ ಹೆಮ್ಮೆಯ ಪರಂಪರೆಯಾಗಿದೆ. ಹಂಪಿ ಉತ್ಸವಕ್ಕೆ ಒಂದು ಇತಿಹಾಸವಿದೆ ಅದನ್ನು ಎಲ್ಲರು ಗೌರವಿಸಬೇಕು ಎಂದು ಹೇಳಿದರು.

BLY reddy press meet 1

ನಾಡಿನಲ್ಲಿ ಹಂಪಿ ಉತ್ಸವ ಪಾರಂಪರಿಕವಾಗಿ ನಡೆದು ಬಂದಿದೆ. ಈಗಿನ ಮೈತ್ರಿ ಸರ್ಕಾರ ನಾಡಿನ ಪರಂಪರೆ, ಸಂಪ್ರದಾಯಗಳನ್ನು ಹಾಳು ಮಾಡಬಾರದು. ರಾಜ್ಯದಲ್ಲಿ ಬರಗಾಲವಿದೆ ಎಂದು ಮೈತ್ರಿ ಸರ್ಕಾರ ಹಂಪಿ ಉತ್ಸವವನ್ನು ಮುಂದೂಡಲು ನಿರ್ಧರಿಸಿರುವುದು ನನ್ನ ಪ್ರಕಾರ ತಪ್ಪು. ಉತ್ಸವ ನಡೆಸಲು ಸರ್ಕಾರದ ಬಳಿ ಹಣವಿಲ್ಲದಿದ್ದರೇ ಭಿಕ್ಷೆ ಬೇಡಿಯಾದ್ರೂ ಹಣ ಹೊಂದಿಸಿಕೊಡುತ್ತೇವೆ. ಬೀದಿ ಬೀದಿಗೆ ನಾವೇ ಹೋಗಿ ಹಂಪಿ ಉತ್ಸವ ಮಾಡೋಕೆ ಸರ್ಕಾರದ ಹತ್ತಿರ ಹಣವಿಲ್ಲ ಎಂದು ಹೇಳಿ ಭಿಕ್ಷೆ ಕೇಳ್ತೀವಿ ಎಂದು ಸರ್ಕಾರ ವಿರುದ್ಧ ಸೋಮಶೇಖರ್ ರೆಡ್ಡಿ ವ್ಯಂಗ್ಯವಾಡಿದರು.

ಹೇಗಾದರು ಸರಿ ಸರ್ಕಾರ ಹಂಪಿ ಉತ್ಸವನ್ನು ಎಂದಿನಂತೆ ವಿಜೃಂಭಣೆಯಿಂದ ಈ ವರ್ಷವು ಮಾಡಲೇಬೇಕು. ದೇಶ – ವಿದೇಶಗಳಿಂದ ಹಂಪಿ ಉತ್ಸವ ನೋಡಲು ಪ್ರವಾಸಿಗರು ಉತ್ಸಾಹದಿಂದ ಬರುತ್ತಾರೆ. ಅವರಿಗೆ ನಿರಾಸೆ ಮಾಡಬೇಡಿ, ಹಂಪಿ ಉತ್ಸವವನ್ನು ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಸೋಮಶೇಖರ್ ರೆಡ್ಡಿ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *