ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿದ ಹಿಂದಿನ ಕಾರಣವೇನು ಎಂಬುವುದು ಗೊತ್ತಾಗಬೇಕಿದೆ ಎಂದು ಪಕ್ಷದ ಮುಖಂಡ ವಿ ಸೋಮಣ್ಣ ಹೇಳಿದ್ದಾರೆ.
ಬಸವನಗುಡಿಯ ತೇಜಸ್ವಿನಿ ಅನಂತಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಶಾಸಕ ವಿ.ಸೋಮಣ್ಣ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದೊಂದು ದುರ್ದೈವದ ಸಂಗತಿ. ಹೀಗೆ ಆಗಬಾರದಿತ್ತು, ವಿಧಿ ಇದು ಅಷ್ಟೇ. ತೇಜಸ್ವಿನಿ ಅವರು ಯಾವುದೇ ತಪ್ಪು ಮಾಡಿಲ್ಲ. ಅಂತಹವರಿಗೆ ಹೀಗೆ ಮಾಡಿದ್ದು ಸರಿಯಿಲ್ಲ. ಏನಾಗಿದೆ ಎಂಬುವುದು ನಾಲ್ಕು ಗೋಡೆ ಮಧ್ಯೆಯಾದರು ನಮಗೆ ಗೊತ್ತಾಗಬೇಕು. ರವಿಸುಬ್ರಮಣ್ಯ, ಪಕ್ಷದ ನೇತಾರರು ಕಾಲ್ ಮಾಡಿದ್ದರು. ಅವರಿಗೆ ಸ್ಪಷ್ಟವಾಗಿ ಹೇಳಿದ್ದೀನಿ, ಇದರಲ್ಲಿ ನಮ್ಮ ಭವಿಷ್ಯವೂ ಆಡಗಿದೆ. ಹಾಗಾಗಿ ಟಿಕೆಟ್ ಕಡೇ ಕ್ಷಣದಲ್ಲಿ ಕೈ ತಪ್ಪಿದ್ದು ಹೇಗೆ, ಏಕೆ? ಯಾರು ಕಾರಣ? ಎಲ್ಲವೂ ಗೊತ್ತಾಗಬೇಕಿದೆ ಎಂದರು.
Advertisement
Advertisement
ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ತಪ್ಪಿದ ಹಿಂದಿನ ಸತ್ಯವೇನು ಎಂದು ತಿಳಿಸುವಂತೆ ಶಾಸಕ ರವಿಸುಬ್ರಮಣ್ಯಗೆ ಕೇಳಿದ್ದೇನೆ. ಇದರ ಹಿಂದೆ ಶಾಸಕ ರವಿಸುಬ್ರಮಣ್ಯ ಪಾತ್ರ ದೊಡ್ಡದಿದೆ. ಇದಲ್ಲದೆ ಬಿಜೆಪಿ ಹಿರಿಯ ನಾಯಕರೊಂದಿಗೆ ಇನ್ನು ಮೂರು ದಿನದ ಒಳಗೆ ಸಭೆ ನಡೆಸಲು ಸೂಚಿಸಿದ್ದೇನೆ. ಆ ಬಳಿಕ ಹೈಕಮಾಂಡ್ ನಿರ್ಧಾರದ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಹೇಳಿದರು.
Advertisement
ಈಗಾಗಲೇ ರವಿಸುಬ್ರಮಣ್ಯ ಅವರು ಶಾಸಕರಾಗಿದ್ದಾರೆ ಅವರ ಅಣ್ಣನ ಮಗನಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿದ್ದಾರೆ. ತೇಜಸ್ವಿ ಸೂರ್ಯ ಇನ್ನೂ ಯುವಕ, ಅನುಭವದ ಅವಶ್ಯಕತೆಯಿದೆ. ಅನಂತ್‍ಕುಮಾರ್ ರಾಷ್ಟ್ರ ರಾಜಕಾರಣದಲ್ಲಿ ಅಜಾತಶತ್ರು. ಅಂತಹ ವ್ಯಕ್ತಿಯ ಪತ್ನಿಗೆ ಅನ್ಯಾಯವಾಗಿದ್ದು ತಮಗೆ ನೋವಾಗಿದೆ ಎಂದರು. ಅಲ್ಲದೇ ಈಗಲೇ ಟೇಕನ್ ಫಾರ್ ಗ್ರ್ಯಾಂಟ್ ಪಾಲಿಸಿ ಆದರೆ ನಮ್ಮ ಭವಿಷ್ಯಕ್ಕೂ ಕುತ್ತು ಬರುತ್ತೆ ಎಂದರು.
Advertisement
ನಾವು ಪಕ್ಷ ಶಿಸ್ತಿನ ಸಿಪಾಯಿಗಳು, ಪಕ್ಷ ಏನು ನಿರ್ಧಾರ ಕೈಗೊಂಡರು ಸಮ್ಮತಿ. ಗೊತ್ತಿದ್ದು ತಪ್ಪು ಆದ್ರೆ ಮಾತ್ರ ವಿವರಣೆ ಕೇಳುತ್ತೆವೆ. ಬೇರೆ ಯಾವ ಕುಟುಂಬಕ್ಕೂ ಇಂತಹ ಸ್ಥಿತಿ ಉಂಟಾಗಬಾರದು. ಮನಸ್ಸಿನಲ್ಲಿ ಏನಿದೆ ಎಂಬುದನ್ನು ಹೇಳಿದ್ದೇನೆ. ದಿಢೀರ್ ಬೆಳವಣಿಗೆ ಒಪ್ಪಿಕೊಳ್ಳಲು ವಿವರಣೆ ಹೇಳಿದ್ದೇನೆ. ಪಕ್ಷವೇ ನಮಗೇ ತಾಯಿ. ನಮ್ಮ ಮನಸ್ಸಿನ ಭಾರವನ್ನಷ್ಟೇ ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಿದ್ದೇವೆ ಎಂದರು.
ಇದಕ್ಕೂ ಮುನ್ನ ತೇಜಸ್ವಿನಿ ಅನಂತ್‍ಕುಮಾರ್ ನಿವಾಸಕ್ಕೆ ಶಾಸಕ ರಾಮದಾಸ್ ಭೇಟಿ ನೀಡಿ ಮಾತುಕತೆ ನಡೆಸಿದರು.