– ಹೊರ ವರ್ತುಲ ರಸ್ತೆಗೆ ವಿರೋಧ ವ್ಯಕ್ತವಾಗಿದ್ರು ಬೇಕು ಎಂದಿದ್ದರು
ಮೈಸೂರು: ಎಸ್.ಎಂ.ಕೃಷ್ಣ (SM Krishna) ಅವರ ಪಾಲಿಗೆ ಮೈಸೂರು ಎರಡನೇಯ ತವರೂರು. ಏಕೆಂದರೆ ತಮ್ಮ 12ನೇ ವಯಸ್ಸಿಗೆ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ (Mysuru) ಬಂದ ಕೃಷ್ಣ ಅವರು ಇಲ್ಲಿಯೇ ಹೈಸ್ಕೂಲ್, ಕಾಲೇಜು ಹಾಗೂ ಪದವಿ ಶಿಕ್ಷಣ ಪಡೆದರು. ಮೈಸೂರಿನಲ್ಲೇ ತಮ್ಮ ಯೌವನದ ಬಹು ದಿನಗಳನ್ನು ಕಳೆದಿದವರು. ಹೀಗಾಗಿ ಮೈಸೂರು ಅಂದರೆ ಎಸ್‌ಎಂಕೆ ಪಾಲಿಗೆ ಇನ್ನೊಂದು ತವರೂರು.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಓದಿ, ಅದೇ ಮೈಸೂರು ವಿವಿಯ ಗೌರವ ಡಾಕ್ಟರೇಟ್‌ಗೂ ಪಾತ್ರರಾದರು. ಯಾವ ದಸರಾವನ್ನು ಕಾಲೇಜು ದಿನಗಳಲ್ಲಿ ಸಾಮಾನ್ಯ ಜನರಂತೆ ನೋಡಿ ಕಣ್ತುಂಬಿಕೊಳ್ಳುತ್ತಿದ್ದರೋ, ಅದೇ ದಸರಾವನ್ನು ತಾವೇ ಉದ್ಘಾಟಿಸಿದರು. ಇದೆಲ್ಲ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಸಾಮಾನ್ಯನಿಂದ ಅಸಾಮಾನ್ಯ ವೃಕ್ತಿಯಾಗಿ ಬೆಳೆದ ನಿಂತ ಪರಿಗೆ ಸಾಕ್ಷಿಯಾಗಿದೆ.ಇದನ್ನೂ ಓದಿ: ಬೆಂಗಳೂರು ಮಾತ್ರವಲ್ಲ ಮಂಗಳೂರು, ಮೈಸೂರು, ಹುಬ್ಬಳ್ಳಿಗೆ ಐಟಿ ಕೊಡುಗೆ ನೀಡಿದ್ದು ಎಸ್‌ಎಂಕೆ – ಪ್ರತಾಪ್ ಸಿಂಹ
ತಾನು ಓದಿ ಬೆಳೆದ ಊರಿನ ಋಣವನ್ನು ಎಸ್.ಎಂ.ಕೃಷ್ಣ ಬಹು ಆದ್ಯತೆಯಿಂದ ತೀರಿಸುವ ಕೆಲಸ ಮಾಡಿದರು. ಮೈಸೂರು ಇನ್ನೂ ಬೆಳವಣಿಗೆಯ ಹಂತದಲ್ಲಿ ಇದ್ದಾಗಲೇ ಮೈಸೂರಿಗೆ ಒಂದು ಭವಿಷ್ಯದ ಫ್ರೇಮ್ ಹಾಕಿಕೊಟ್ಟವರು. ಈ ಊರಿಗೆ ಬೆಂಗಳೂರಿನಂತೆ ಬೆಳೆಯುವ ಶಕ್ತಿ ಇದೆ. ಆದರೆ ಈ ಊರು ಬೆಂಗಳೂರಿನಂತೆ ಹೇಗೇಗೋ ಬೆಳೆಯಬಾರದು ಇದಕ್ಕೆ ಅಚ್ಚುಕಟ್ಟು ಇರಬೇಕು ಎಂದು ತಾವು ಸಿಎಂ ಆಗಿದ್ದ ವೇಳೆಯಲ್ಲಿ ಹತ್ತಾರು ಬಾರಿ ಹೇಳಿದ್ದರು. ಮೈಸೂರಿನಲ್ಲಿರುವ ರಸ್ತೆಗಳೇ ಖಾಲಿ ಇವೆ, ಇದಕ್ಕೆ ಯಾಕೆ ಬೇಕು ಹೊರವರ್ತುಲ ರಸ್ತೆ? ಎಂದು ಅಲ್ಲಿಯವರೇ ಹೇಳುತ್ತಿದ್ದರು. ಆ ಸಂದರ್ಭದಲ್ಲಿ ಇಲ್ಲ ಮೈಸೂರಿಗೆ ಭವಿಷ್ಯಕ್ಕೆ ಇದು, ಬೇಕು ಎಂದು ನಿರ್ಧರಿಸಿ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಮುಂದಾದರು. ಅವತ್ತು ಯಾವುದು ಬೇಡವಾಗಿತ್ತೋ, ಇವತ್ತು ಅದೇ ಹೊರವರ್ತುಲ ರಸ್ತೆ ಮೈಸೂರಿನ ಅಭಿವೃದ್ಧಿಯನ್ನೇ 10 ಪಟ್ಟು ಹೆಚ್ಚು ಮಾಡಿಸಿದೆ.
ಬೆಂಗಳೂರು-ಮೈಸೂರು ನಡುವೆ ನಾಲ್ಕು ಪಥದ ರಸ್ತೆ ಮಾಡಿಸಿದ ಎಸ್.ಎಂ. ಕೃಷ್ಣ ಬೆಂಗಳೂರು ಮತ್ತು ಮೈಸೂರು ನಡುವೆ ಬಹಳ ದೊಡ್ಡ ಕೊಂಡಿ ನಿರ್ಮಿಸಿ ಮೈಸೂರಿನ ವೇಗದ ಬೆಳವಣಿಗೆಗೆ ಕಾರಣರಾದರು. ಯಾವಾಗ ಮೈಸೂರು – ಬೆಂಗಳೂರು ನಡುವೆ ನಾಲ್ಕು ಪಥದ ರಸ್ತೆ, ಮೈಸೂರಿಗೆ ಹೊರ ವರ್ತುಲ ರಸ್ತೆ ಶುರುವಾದವೋ ಮೈಸೂರಿನಲ್ಲಿ ಐಟಿ – ಬಿಟಿ ಕ್ಷೇತ್ರ ಚಿಗುರೊಡೆಯಿತು. ಎಸ್‌ಎಂಕೆ ಅವರ ಕಾಲದಲ್ಲಿಯೇ ಮೈಸೂರಿನಲ್ಲಿ ಇನ್ಫೋಸಿಸ್, ವಿಪ್ರೋ, ನೆಸ್ಟ್ಲೆಯಂತಹ ದೊಡ್ಡ ದೊಡ್ಡ ಕಂಪನಿಗಳು ಶುರುವಾದವು. ತಾವು ಓದಿದ ಊರಿನ ಋಣವನ್ನು ಎಸ್.ಎಂ. ಕೃಷ್ಣ ಅವರು ಬಡ್ಡಿ ಸಮೇತ ತೀರಿಸಿದರು. ಉಪ್ಪಿನ ಋಣ ತೀರಿಸೋದು ಅಂದರೆ ಇದೇ ಇರಬೇಕೇನೋ! ಎಸ್.ಎಂ. ಕೃಷ್ಣ ಸರ್ ನಿಮ್ಮನ್ನು ಮೈಸೂರು ಎಂದಿಗೂ ಮರೆಯಲ್ಲ.ಇದನ್ನೂ ಓದಿ: ಅಣ್ಣಾವ್ರಿಗೆ ಮರು ಜೀವ ಕೊಟ್ಟಿದ್ದೇ ಎಸ್‌ಎಂ ಕೃಷ್ಣ: ಸಾರಾ ಗೋವಿಂದು