– 20 ದಿನದಲ್ಲಿ 30 ಲಕ್ಷ ಮೌಲ್ಯದ ಬೆಳೆ ನಾಶ!
ಚಿಕ್ಕಮಗಳೂರು: ತಾಲೂಕಿನ (Chikkamagaluru) ಕೆಲವೆಡೆ ಬೀಟಮ್ಮ ಗ್ಯಾಂಗಿನ (Wild Elephant) ಹಾವಳಿಗೆ ಮಲೆನಾಡಿನ ಜನ ಕಂಗಾಲಾಗಿದ್ದಾರೆ. 20 ದಿನದಲ್ಲಿ ಆನೆಗಳ ಹಿಂಡಿನಿಂದ 30 ಲಕ್ಷ ರೂ. ಮೌಲ್ಯಕ್ಕೂ ಹೆಚ್ಚಿನ ಬೆಳೆಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಜನ ಮನೆಯಿಂದ ಹೊರಬರಲು ಸಹ ಹಿಂದೇಟು ಹಾಕುತ್ತಿದ್ದಾರೆ. ಮಾಲೀಕರು-ಕಾರ್ಮಿಕರು ತೋಟಗಳಿಗೂ ಹೋಗುತ್ತಿಲ್ಲ. 4 ಮರಿ ಆನೆ ಇರುವುದರಿಂದ ಆನೆಗಳನ್ನ ಓಡಿಸುವುದು ಅರಣ್ಯ ಇಲಾಖೆಗೆ ಕಷ್ಟವಾಗಿದೆ. ಇದರಿಂದ ಹಳ್ಳಿಗರು ಆತಂಕದಲ್ಲಿದ್ದಾರೆ. ಅಧಿಕಾರಿಗಳು ಸಹ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ.
ಆನೆಗಳಿಂದ ಬೆಳೆ ಹಾನಿಗೊಳಗಾಗದ ಪ್ರದೇಶಗಳಿಗೆ ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯ (H. D. Thammaiah) ಶನಿವಾರ ಭೇಟಿ ನೀಡಿದ್ದರು. ಈ ವೇಳೆ ಮೂಗ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ದುಂಬಗೆರೆ, ಎಂಎಂಡಿ ಹಳ್ಳಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಗ್ರಾಮಗಳ ಮುಖಂಡರ ಜೊತೆ ತೆರಳಿ ಬೆಳೆಹಾನಿ ಪರಿಶೀಲನೆ ನಡೆಸಿದರು. ಇದೇ ವೇಳೆ, ರೈತರ ಬೆಳೆಗಳ ಹಾನಿಗೆ ಹೆಚ್ಚುವರಿ ಪರಿಹಾರ ಕೊಡುವಂತೆ ಹಾಗೂ ಶೀಘ್ರ ಆನೆಗಳನ್ನು ಓಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಾಡಾನೆಗಳು ಬೀಡು ಬಿಟ್ಟಿರುವ ಪ್ರದೇಶಗಳ ಸುತ್ತಮುತ್ತ ಇರುವ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದಕ್ಕೆ ಶಾಸಕ ತಮ್ಮಯ್ಯ ಮೆಸ್ಕಾಂ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಆನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಭೆ ನಡೆಸಿದ್ದು, ಗಂಭೀರ ಚರ್ಚೆ ಆಗಿದೆ. ಬೆಳಗಾವಿ ಅಧಿವೇಶನದಲ್ಲಿ (Session) ಹಾಗೂ ಅರಣ್ಯ ಸಚಿವರ ಜೊತೆ ಸಭೆ ನಡೆಸಿ ಆನೆ ಹಾವಳಿಗೆ ಶಾಶ್ವತ ಪರಿಹಾರ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.