ಬೆಂಗಳೂರು: ಯೋಧರೊಬ್ಬರನ್ನು ಹಗ್ಗದಿಂದ ಕತ್ತು ಬಿಗಿದು ನಂತರ ಚಾಕುವಿನಿಂದ ಕತ್ತು ಕೊಯ್ದು ಇಬ್ಬರು ಯೋಧರೇ ಕೊಲೆ ಮಾಡಿದ ಘಟನೆ ಬೆಂಗಳೂರಿನ ವಿವೇಕನಗರದ ಎಎಸ್‍ಸಿ ಸೆಂಟರ್ ಮತ್ತು ಕಾಲೇಜು ಕ್ಯಾಂಪಸ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪಂಕಜ್ ಕೊಲೆಯಾದ ಯೋಧ. ಮೂರು ದಿನಗಳ ಹಿಂದೆ ಪಂಕಜ್ ರನ್ನು ಮುರಳಿಕೃಷ್ಣ ಹಾಗೂ ಧನರಾಜ್ ಎಂಬ ಯೋಧರೇ ಕೊಲೆ ಮಾಡಿದ್ದರು. ಪಂಕಜ್ ಮೂಲತ ಉತ್ತರಪ್ರದೇಶದವರಾಗಿದ್ದು, ಆರೋಪಿಗಳಿಬ್ಬರು ಆಂಧ್ರಪ್ರದೇಶದವರು ಎಂದು ತಿಳಿದು ಬಂದಿದೆ.
ಇದೇ ತಿಂಗಳು 23ರಂದು ಘಟನೆ ನಡೆದಿದ್ದು, ಪಂಕಜ್ ಕೊಠಡಿಯಲ್ಲಿ ಮಲಗಿದ್ದಾಗ ಹಗ್ಗದಿಂದ ಪಂಕಜ್ ನ ಕತ್ತು ಬಿಗಿದು ನಂತರ ಚಾಕುವಿನಿಂದ ಕತ್ತು ಕೊಯ್ದು ಆರೋಪಿಗಳಾದ ಮುರುಳಿಕೃಷ್ಣ ಮತ್ತು ಧನರಾಜ್ ಕೊಲೆಗೈದಿದ್ದಾರೆ ಎಂದು ಡಿಸಿಪಿ ಚಂದ್ರಗುಪ್ತ ಹೇಳಿದ್ದಾರೆ.
ಏನಿದು ಪ್ರಕರಣ?
ಮುರುಳಿಕೃಷ್ಣ ಕೊಲೆಯಾದ ಪಂಕಜ್ ಐಡಿ ಕಾರ್ಡ್ ನನ್ನು ಕದ್ದಿದ್ದ. ಐಡಿ ಕಾರ್ಡ್ ಕದ್ದ ನಂತರ ಈ ಬಗ್ಗೆ ಸೇನೆಯಲ್ಲಿ ಆಂತರಿಕ ತನಿಖೆ ಎದುರಿಸುತ್ತಿದ್ದ. ಕದ್ದಿರುವ ಬಗ್ಗೆ ಸಾಕ್ಷಿ ಹೇಳದಂತೆ ಪಂಕಜ್ ಅವರಿಗೆ ಧಮ್ಕಿ ಹಾಕಿದ್ದ. ಈ ಪ್ರಕರಣದಿಂದ ಹಿಂದೆ ಸರಿಯುವಂತೆ ಸಹ ಇಬ್ಬರು ಬೆದರಿಕೆ ಹಾಕಿದ್ದರು. ಆದರೆ ಪಂಕಜ್ ಇದಕ್ಕೆ ಒಪ್ಪದೇ ಇದ್ದಾಗ ಒಂದೇ ಊರಿನ ಸ್ನೇಹಿತನ ಜೊತೆ ಸೇರಿ ಮುರುಳಿಕೃಷ್ಣ ಕೊಲೆ ಮಾಡಿದ್ದಾನೆ.
ಮುರುಳಿಕೃಷ್ಣ ಹಾಗೂ ಧನರಾಜ್, ಪಂಕಜ್ ರನ್ನು ಕೊಲೆ ಮಾಡಿದ ನಂತರ ಮೃತದೇಹವನ್ನು ಆರ್ಮಿ ಟ್ರಕ್ ನಲ್ಲಿ ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ರಾತ್ರೋ ರಾತ್ರಿ ಸುಟ್ಟು ಹಾಕಿದ್ದಾರೆ. ನಂತರ ಏನು ತಿಳಿಯದಂತೆ ನಾಟಕವಾಡಿ ಕೊಠಡಿಗೆ ಬಂದು ಮಲಗಿಕೊಂಡಿದ್ದಾರೆ ಎಂದು ಡಿಸಿಪಿ ಚಂದ್ರಗುಪ್ತ ತಿಳಿಸಿದ್ದಾರೆ.
ಈ ಬಗ್ಗೆ ವಿವೇಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.