ಗ್ರಾಮಸ್ಥರಿಂದ ವೀರ ಯೋಧರಿಗೆ ಆರತಿ ಬೆಳಗಿ ಗೌರವ ನಮನ

Public TV
1 Min Read
ckb sainikarige sanmana 1

ಚಿಕ್ಕಬಳ್ಳಾಪುರ: ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಸೈನಿಕರ ಪರ ಮೊಳಗುವ ಜಯ ಘೋಷಗಳು, ದೇಶದ ಪರ ಮೆರೆಯುವ ಅಭಿಮಾನ ಸಹಜವಾಗಿ ನೋಡುತ್ತೇವೆ. ಆದರೆ ಇಲ್ಲಿ ಜನರು ಯೋಧರಿಗೆ ಆರತಿ ಬೆಳಗಿ ಗೌರವ ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ ಹೋಬಳಿ ಬಚ್ಚಹಳ್ಳಿ ಗ್ರಾಮಸ್ಥರು ಕಾರ್ಗಿಲ್ ಯುದ್ಧ ಸೇರಿದಂತೆ ದೇಶದ ಪರ ಹೋರಾಡಿದ ವೀರ ಯೋಧರನ್ನು ತಮ್ಮೂರಿಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಅಲ್ಲದೆ ಸೈನಿಕರಿಗೆ ಹಾರ ಹಾಕಿ, ಮನೆ-ಮನೆಗೂ ಆರತಿ ಬೆಳಗಿ, ಹಣೆಗೆ ತಿಲಕ ಇಟ್ಟು, ತೆಂಗಿನಕಾಯಿಯಿಂದ ದೃಷ್ಟಿ ತೆಗೆದು ಚೂರುಗಾಯಿ ಹಾಕಿ ಗೌರವ ನಮನಗಳನ್ನು ಸಲ್ಲಿಸಿದ್ದರು. ಸೈನಿಕರ ದೇಶ ಸೇವೆ ಅನನ್ಯವಾಗಿದ್ದು, ಈ ರೀತಿಯ ಗೌರವಗಳು ಹಳ್ಳಿಹಳ್ಳಿಯಲ್ಲೂ ನಡೆದು ದೇಶಕಾಯಕದ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಆಗಬೇಕೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ckb sainikarige sanmana

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಚಿಕ್ಕನಂಚರ್ಲು ಗ್ರಾಮಸ್ಥರು ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದ್ದನ್ನೇ ಮಾದರಿಯಾಗಿ ತೆಗೆದುಕೊಂಡ ಬಚ್ಚಹಳ್ಳಿ ಗ್ರಾಮಸ್ಥರು ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿ, ನಮಗೆ ನೀವಿದ್ದೀರಾ, ನಿಮಗೆ ನಾವೀದ್ದೀವಿ ಎಂದು ಸೈನಿಕರಿಗೆ ಗೌರವ ಸಲ್ಲಿಸಿದರು. ಗ್ರಾಮಸ್ಥರ ಆಪ್ಯಾಯಮಾನಕ್ಕೆ ಸೈನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ಕೊಡಗಿನ ಮಾದರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೂ ದೇಶ ಸೇವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬೇಕೆಂದು ಯೋಧರು ಅಭಿಪ್ರಾಯ ವ್ಯಕ್ತಪಡಿಸಿದರು.

ಸೇನೆಯಲ್ಲಿ ತಾವು ಸೇವೆ ಸಲ್ಲಿಸದಿದ್ದರೂ ಸೇವೆ ಮಾಡಿದವರಿಗೆ ಪುಟ್ಟ ಸನ್ಮಾನ ಮಾಡುವ ಮೂಲಕ ಬಚ್ಚಹಳ್ಳಿ ಗ್ರಾಮಸ್ಥರು ಧನ್ಯತಾಭಾವ ಮೆರೆದರು.

Share This Article
Leave a Comment

Leave a Reply

Your email address will not be published. Required fields are marked *