ಶ್ರೀನಗರ: ಪಾಕಿಸ್ತಾನ ಮತ್ತೆ ಕದನವಿರಾಮ ಉಲ್ಲಂಘಿಸಿದ್ದು, ಪಾಕ್ ನಡೆಸಿದ ಶೆಲ್ ದಾಳಿಗೆ ಓರ್ವ ಯೋಧ ಹುತಾತ್ಮರಾಗಿರುವ ಘಟನೆ ರಾಜೌರಿ ಜಿಲ್ಲೆಯಲ್ಲಿ ನಡೆದಿದೆ.
ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕ್ ಕದನ ವಿರಾಮ ಉಲ್ಲಂಘಿಸಿತ್ತು. ಪಾಕ್ ನಡೆಸಿದ ಶೆಲ್ ದಾಳಿಗೆ ಓರ್ವ ಸೈನಿಕ ಹುತಾತ್ಮರಾಗಿದ್ದು, ಡೆಹರಾಡೂನ್‍ನ ಲ್ಯಾನ್ಸ್ ನಾಯಕ್ ಸಂದೀಪ್ ಥಾಪ (35) ಎಂದು ಗುರುತಿಸಲಾಗಿದೆ. ಹುತಾತ್ಮ ಯೋಧ ಸಂದೀಪ್ ಸುಮಾರು 15 ವರ್ಷಗಳಿಂದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕೋಲ್ ದೇವೇಂದರ್ ಆನಂದ್ ಮಾಹಿತಿ ನೀಡಿದ್ದಾರೆ.
Advertisement
Army Sources: A Pakistani post opposite the RAJOURI sector (J&K) has been hit in action by Indian Army today. The exchange of fire between the two sides is still on after Pakistan violated ceasefire. One Indian Army soldier lost his life this morning in Pakistani firing pic.twitter.com/ws4rnRQndr
— ANI (@ANI) August 17, 2019
Advertisement
ಲ್ಯಾನ್ಸ್ ನಾಯಕ್ ಸಂದೀಪ್ ಥಾಪಾ ಅವರು ಧೈರ್ಯಶಾಲಿ ಸೈನಿಕರಾಗಿದ್ದರು. ಅವರ ಕರ್ತವ್ಯ ಮತ್ತು ತ್ಯಾಗಕ್ಕೆ ರಾಷ್ಟ್ರವು ಅವರಿಗೆ ಋಣಿಯಾಗಿರುತ್ತದೆ ಎಂದು ವಕ್ತಾರರು ತಿಳಿಸಿದ್ದಾರೆ.
Advertisement
ಪಾಕಿಸ್ತಾನ ಸೈನಿಕರು ಬೆಳಗ್ಗೆ 6.30ರ ಹೊತ್ತಿಗೆ ನೌಶೇರಾ ಸೆಕ್ಟರ್ ನಲ್ಲಿ ಗುಂಡು ಹಾರಿಸುವುದು ಮತ್ತು ಶೆಲ್ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿದರು. ಭಾರತೀಯ ಸೇನೆ ಸಹ ಇದಕ್ಕೆ ಸೂಕ್ತ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಬೆಳಗ್ಗೆ ಗುಂಡಿನ ಚಕಮಕಿ ತೀವ್ರವಾಗಿತ್ತು, ಅಂತಿಮ ವರದಿ ಬಂದಾಗ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ತಿಳಿಸಿದ್ದಾರೆ.
Advertisement
ಇತ್ತೀಚೆಗೆ ಪೂಂಛ್ ಜಿಲ್ಲೆಯ ಕೆಜಿ ಸೆಕ್ಟರ್ ನಲ್ಲಿ ಭಾರತ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಪಾಕಿಸ್ತಾನ ಸೈನಿಕರು ಹತರಾಗಿದ್ದಾರೆ ಎಂದು ಪಾಕ್ ಆರೋಪಿಸಿತ್ತು. ಈ ವಾದವನ್ನು ಭಾರತ ತಿರಸ್ಕರಿಸಿತ್ತು.
ಕೇಂದ್ರ ಸರ್ಕಾರ ಆಗಸ್ಟ್ 5 ಮತ್ತು 6ರಂದು 370ನೇ ವಿಧಿಯನ್ನು ರದ್ದು ಪಡಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ ನಂತರ ಪಾಕ್‍ನ ಪುಂಡಾಟ ಹೆಚ್ಚಾಗಿದೆ. ಈ ಮೂಲಕ ಪಾಕಿಸ್ತಾನ ಸೇನೆಯು ನಿಯಮಿತವಾಗಿ ಒಪ್ಪಂದವನ್ನು ಉಲ್ಲಂಘಿಸುತ್ತಿದ್ದು, ಉಗ್ರರನ್ನು ಜಮ್ಮು ಕಾಶ್ಮೀರಕ್ಕೆ ನುಗ್ಗಿಸಲು ಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದ ಪುಂಡಾಟಕ್ಕೆ ದಂಡನಾತ್ಮಕವಾಗಿಯೇ ಪ್ರತಿಕ್ರಿಯಿಸುತ್ತೇವೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಈಗಾಗಲೇ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.