– 2 ಕೈ, 1 ಕಾಲು ಕಳೆದುಕೊಂಡ ಯೋಧನ ಕರುಣಾಜನಕ ಕಥೆ ಓದಿ
ಬಾಗಲಕೋಟೆ: ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಒಬ್ಬೊಬ್ಬ ಯೋಧನ ಕಥೆ ಒಂದೊಂದು ರೀತಿ ಇದೆ. ಆದರೆ ಇಲ್ಲೊಬ್ಬರು ಯೋಧನ ಕಥೆ ತುಂಬಾ ವಿಭಿನ್ನವಾಗಿದ್ದು, ಇವರು ಮಾರಣಾಂತಿಕವಾಗಿ ಗಾಯಗೊಂಡ ವೇಳೆ ತಾಯಿಯಂತೆ ಆರೈಕೆ ಮಾಡಿದ್ದ ಓರ್ವ ಸ್ಟಾಪ್ ನರ್ಸ್ ಭೇಟಿಗಾಗಿ ಮಗುವಿನಂತೆ 20 ವರ್ಷಗಳಿಂದಲೂ ಕಾಯುತ್ತಿದ್ದಾರೆ. ಇದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹುಲಸಗೇರಿ ಗ್ರಾಮದ ನಿವಾಸಿ ರಂಗಪ್ಪ ಆಲೂರ ವೀರಯೋಧನ ಕರುಣಾಜನಕ ಕಥೆಯಾಗಿದೆ.
ಕಾರ್ಗಿಲ್ ಯುದ್ದ ನಡೆದು ಈಗ 20 ವರ್ಷಗಳು ಗತಿಸಿವೆ. ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಗೆಲುವಿನ ನಗೆ ಬೀರಿದ ದಿನ ಇಂದು. ಅಂತಹ ಭಯಾನಕ ಯುದ್ಧದಲ್ಲಿ 21 ದಿನಗಳ ಕಾಲ ರಂಗಪ್ಪ ಆಲೂರ ಅವರು ಹೋರಾಡಿ ಶತ್ರುಗಳ ಸದೆಬಡಿದವರು. ರಂಗಪ್ಪ ಆಲೂರು 1993ರಲ್ಲಿ ಭಾರತೀಯ ಸೇನೆಗೆ ನೇಮಕಗೊಂಡಿದ್ದರು. ನೇಮಕಗೊಂಡ 6 ವರ್ಷದಲ್ಲಿ ಕಾರ್ಗಿಲ್ ಯುದ್ಧ ಶುರುವಾಗಿದ್ದು, ಈ ಯುದ್ಧದಲ್ಲಿ 21 ದಿನಗಳ ಕಾಲ ಭಾಗಿಯಾಗಿದ್ದ ರಂಗಪ್ಪ ಆಲೂರು 21 ನೇ ದಿನ ಶತ್ರುಗಳ ಮಿಸೈಲ್‍ಗೆ ತುತ್ತಾಗಿ ತಮ್ಮ ಎರಡು ಕೈ ಹಾಗೂ ಒಂದು ಕಾಲನ್ನು ಕಳೆದುಕೊಂಡಿದ್ದರು. ಸೇನೆಯಲ್ಲಿ ಇವರ ಸೇವೆಗೆ ಸರ್ಕಾರದಿಂದ ಸಿಗಬೇಕಾದ ಭೂಮಿ ಸೈಟ್, ಪರಿಹಾರ ಧನ ಎಲ್ಲವೂ ಸಿಕ್ಕಿದೆ. ಆದರೆ ಇವರ ತುಡಿತವೇ ಬೇರೆಯಾಗಿದೆ.
Advertisement
Advertisement
ಅಂದು ಯುದ್ಧದಲ್ಲಿ ಗಾಯಗೊಂಡು ಎರಡು ವರ್ಷಗಳ ಕಾಲ ಚಿಕಿತ್ಸೆಗೆ ಒಳಗಾದ ವೇಳೆ ನನ್ನನ್ನು ಮಗುವಿನಂತೆ ಕನ್ನಡತಿ ಸ್ಟಾಪ್ ನರ್ಸ್ ಗೀತಾ ಆರೈಕೆ ಮಾಡಿದ್ದರು. ಚಂಡೀಗಢದ ಮಿಲಿಟರಿ ಆಸ್ಪತ್ರೆಯಲ್ಲಿ ಎರಡು ವರ್ಷ ಆರೈಕೆ ಮಾಡಿದ ಗೀತಾ ಅವರನ್ನು ಭೇಟಿಯಾಗಬೇಕೆಂದು 20 ವರ್ಷದಿಂದ ಕಾದಿದ್ದೇನೆ. ಹೇಗೋ ಮಾಡಿ ಅವರ ನಂಬರ್ ಪಡೆದಿದ್ದು, ಇದೇ ತಿಂಗಳು 29ರಂದು ಅವರನ್ನು ಭೇಟಿ ಮಾಡಲು ಹೊಗಲಿದ್ದೇನೆ. ಅವರು ನನ್ನ ತಾಯಿ, ಅವರೇ ನನ್ನ ಪಾಲಿನ ಭಾರತಮಾತೆ. ಅವರನ್ನು ಭೇಟಿಯಾದಾಗಲೇ ನನ್ನ ಜೀವನ ಸಾರ್ಥಕ ಎಂದು ರಂಗಪ್ಪ ಆಲೂರ ಹೇಳಿದ್ದಾರೆ.
Advertisement
ರಂಗಪ್ಪ ಆಲೂರ ಅವರಿಗೆ ಎರಡು ಕೈಗಳಿಲ್ಲ, ಒಂದು ಕಾಲು ಇಲ್ಲ. ಇದರಿಂದ ಪ್ರತಿನಿತ್ಯ ಇವರಿಗೆ ಕುಟುಂಬಸ್ಥರ ಸಹಕಾರ ಬೇಕೇ ಬೇಕು. ಕುಟುಂಬಸ್ಥರು ಕೂಡ ಇವರನ್ನು ತುಂಬಾ ಕಾಳಜಿಯಿಂದ ಆರೈಕೆ ಮಾಡುತ್ತಿದ್ದಾರೆ. ತಮ್ಮ ಪರಿಸ್ಥಿತಿ ವೈಕಲ್ಯತನದಿಂದ ಕೂಡಿದ ಕಾರಣ ಮತ್ತೊಬ್ಬರಿಗೆ ಹೊರೆಯಾಗಬಾರದೆಂದು ಇವರು ಮದುವೆ ಕೂಡ ಆಗಿಲ್ಲ. ಆದರೆ ಇವರ ಮನದಲ್ಲಿ ಸದಾ ಕಾಡುತ್ತಿರುವ ಕೊರಗು ಸ್ಟಾಪ್ ನರ್ಸ್ ಗೀತಾ ಅವರನ್ನು ಭೇಟಿಯಾಗುವುದು ಮಾತ್ರ. ದೇಹದಲ್ಲಿ ಒಟ್ಟು 28 ಆಪರೇಷನ್ ಆಗಿದ್ದು, ಇವರ ಎರಡು ವರ್ಷದ ಚಿಕಿತ್ಸಾ ಅವಧಿಯಲ್ಲಿ ತಮ್ಮ ಸ್ವಂತ ಮಗುವಿನಂತೆ ಗೀತಾ ಅವರು ಈ ಯೋಧನನ್ನು ಆರೈಕೆ ಮಾಡಿದ್ದಾರೆ. ವೀರಯೋಧ ಎಂಬ ಅಭಿಮಾನ ಜೊತೆಗೆ ನಮ್ಮ ಕನ್ನಡಿಗ ಎಂಬ ಕಾಳಜಿ ಎಲ್ಲಕ್ಕಿಂತಲೂ ತಾಯಿ ಹೃದಯ, ತಾಯಿ ಪ್ರೀತಿ ತೋರಿಸಿ ಇವರು ಗುಣಮುಖವಾಗಲು ಕಾಣರಾಗಿದ್ದು ಗೀತಾ ಎಂದು ಸಂಬಂಧಿಕರಾದ ಶ್ರೀಕಾಂತ್ ತಿಳಿಸಿದ್ದಾರೆ.
Advertisement
ಮಹಾತಾಯಿಯನ್ನು ಭೇಟಿ ಮಾಡಲು ಇವರು ಬರೋಬ್ಬರಿ 20 ವರ್ಷ ಕಾದಿದ್ದಾರೆ. ಕೊನೆಗೂ ಸತತ ಪ್ರಯತ್ನದ ಮೇರೆಗೆ ಇತ್ತೀಚೆಗೆ ಅವರ ಫೋನ್ ನಂಬರ್ ಪಡೆದು ಒಂದು ಫೋಟೋ ಪಡೆದಿದ್ದಾರೆ. ದಿನಾಲೂ ಅವರ ಮೊಬೈಲ್‍ನಲ್ಲಿ ಗೀತಾ ಅವರ ಫೋಟೋ ನೋಡಿಯೇ ಇವರು ಜೀವನ ಆರಂಭಿಸುತ್ತಾರೆ. ಇದರ ಜೊತೆಗೆ ಇಂದಿಗೂ ಸೇನೆ ಬಗ್ಗೆ ಅಭಿಮಾನ ದೇಶ ಕಾಯಬೇಕೆಂಬ ತುಡಿತವಿದೆ. ಇದಕ್ಕಾಗಿ ಸಮಯ ಸಿಕ್ಕಾಗಲೆಲ್ಲ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಕಾರ್ಗಿಲ್ ಯುದ್ಧದ ಬಗ್ಗೆ ಅನುಭವ ಹಂಚಿಕೊಳ್ಳುತ್ತಾರೆ. ಸೇನೆಗೆ ಸೇರುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಾ ಸೈನ್ಯಕ್ಕೆ ಸೇರಲು ಹೇಗೆಲ್ಲ ತಯಾರಾಗಬೇಕೆಂದು ಸಲಹೆ ನೀಡುತ್ತಾರೆ. ಇವರನ್ನು ಕಂಡರೆ ವಿದ್ಯಾರ್ಥಿಗಳಿಗೆ, ಸ್ಥಳೀಯರಿಗೆ ಮತ್ತು ಕುಟುಂಬಸ್ಥರಿಗೆ ಎಲ್ಲರಿಗೂ ಹೆಮ್ಮೆಯಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ವಿದ್ಯಾರ್ಥಿ ಸಮರ್ಥ್ ಹೇಳಿದ್ದಾನೆ.