ಬೆಳಗಾವಿ: ನಾವು ನೆಮ್ಮದಿಯಿಂದ ಇರಲು ಇಬ್ಬರು ಮಾತ್ರ ಕಾರಣ ಅವರೆಂದರೆ ದೇಶ ಕಾಯುವ ಸೈನಿಕ ಮತ್ತು ಅನ್ನ ನೀಡುವ ರೈತ. ತನ್ನ ಕುಟುಂಬದ ಜೀವನವನ್ನು ತ್ಯಾಗ ಮಾಡಿ ತನ್ನ ಹೆಂಡತಿ-ಮಕ್ಕಳಿಂದ ದೂರವಿದ್ದು, ದೇಶದಲ್ಲಿದ್ದ ಜನರ ಸಲುವಾಗಿ ತನ್ನ ಪ್ರಾಣವನ್ನು ಕೊಡಲು ಸಿದ್ಧವಿರುವ ವ್ಯಕ್ತಿಯೆಂದರೆ ಸೈನಿಕ ಎಂದು ಬಿ.ಬಿ.ಹಂದಿಗುಂದ ಹೇಳಿದ್ದಾರೆ.
ವೀರಯೋಧ ಶಿವಬಸಪ್ಪ ಪಾಟೀಲ್, ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಮೊದಲನೇಯ ಬ್ಯಾಚ್‍ನ ವಿದ್ಯಾರ್ಥಿ ಭಾರತಿಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಮೂಡಲಗಿಗೆ ಆಗಮಿಸಿದ್ದರು. ಅವರ ಸತ್ಕಾರ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ತನ್ನ ಪ್ರಾಣವನ್ನು ಪಣವಾಗಿಟ್ಟು ನಮಗಾಗಿ ದೇಶ ಸೇವೆ ಮಾಡುವ ಏಕೈಕ ವ್ಯಕ್ತಿ ಸೈನಿಕ ಎಂದು ಹೇಳಿದರು.
ಸೈನಿಕ ಶಿವಬಸಪ್ಪ ಪಾಟೀಲ್ ಮಾತನಾಡಿ, ಈ ಸೈನಿಕ ತರಬೇತಿ ಕೇಂದ್ರದಿಂದ ಸಾವಿರಾರು ಶಿಬಿರಾರ್ಥಿಗಳು ಆರ್ಮಿ ಮತ್ತು ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದಾರೆ. ನಾನು ಈ ತರಬೇತಿ ಕೇಂದ್ರದಲ್ಲಿ ಮೊದಲನೇಯ ಬ್ಯಾಚ್‍ನ ಶಿಬಿರಾರ್ಥಿಯಾಗಿ ಬಂದು ಆರ್ಮಿಯಲ್ಲಿ ಆಯ್ಕೆಯಾಗಿ ಈಗ ನಾನು ನಿವೃತ್ತಿಯಾಗಿ ಬಂದಿದ್ದೇನೆ. ದೇಶ ಸೇವೆ ಮಾಡಲು ಅವಕಾಶ ಮಾಡಿ ಕೊಟ್ಟಂತಹ ಈ ಸಂಸ್ಥೆಗೆ ನಾನು ಋಣಿಯಾಗಿರುತ್ತೇನೆ. ಜೀವನದಲ್ಲಿ ಮುಂದೆ ಗುರಿ ಹಿಂದೆ ಗುರು ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ಅಡಿಹುಡಿ ಮಾತನಾಡಿ, ಇಷ್ಟು ಶಕ್ತಿಯುತವಾಗಿ ಬೆಳೆದಿರುವ ಭಾರತೀಯ ಸೇನೆಯ ಇತಿಹಾಸ ಮಾತ್ರ ರೋಚಕಗೊಳಿಸುವಂತದ್ದು. ಏಕೆಂದರೆ ಬ್ರಿಟಿಷರು ಈ ದೇಶದಲ್ಲಿ ಇರುವವರೆಗೆ ಭಾರತೀಯರನ್ನ ತಮ್ಮ ಸೇನೆಗೆ ಬಳಸಿಕೊಳ್ಳತಿದ್ದರು. ಭಾರತೀಯ ಸೈನಿಕರು ತನ್ನ ತಾಯಿನಾಡಿನ ಗೌರವ ಕಾಪಾಡಲು ತಮ್ಮ ಜೀವನ ಮತ್ತು ರಕ್ತದೊಂದಿಗೆ ರಕ್ಷಿಸುತ್ತಾರೆ. ತನ್ನ ದೇಶವನ್ನು ಕಾಪಾಡಿಕೊಳ್ಳಲು ತಮ್ಮ ಜೀವವನ್ನು ಲೆಕ್ಕಿಸದೆ ಹೋರಾಟ ಮಾಡುತ್ತಾರೆ ನಮ್ಮ ಸೈನಿಕರು ಎಂದರು.