ಬೆಳಗಾವಿ: ಕರ್ತವ್ಯದ ವೇಳೆ ಹುತಾತ್ಮರಾಗಿದ್ದ ಬೆಳಗಾವಿಯ ವೀರಯೋಧ ಬಸಪ್ಪ ಭಜಂತ್ರಿ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನಡೆಯಿತು.
ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸಪ್ಪ ಭಜಂತ್ರಿ ಸೋಮವಾರ ಉಗ್ರರ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾಗಿದ್ದರು.
ಬಸಪ್ಪ ಅವರು ಕಳೆದ 20 ವರ್ಷಗಳಿಂದ ಸಿಆರ್‍ಪಿಎಫ್ ನಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರ ಶ್ರೀನಗರ ಪಟಾಣ್ ಚೌಕ್ ಬಳಿ ಯೋಧರು ಸಾಗುತ್ತಿದ್ದ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಬಸಪ್ಪ ಅವರು ಸೇರಿದಂತೆ 10 ಜನ ಯೋಧರು ವೀರ ಮರಣವನ್ನಪ್ಪಿದ್ದರು. ಮಂಗಳವಾರ ಶ್ರೀನಗರದಿಂದ ವಿಮಾನದ ಮೂಲಕ ಗೋವಾ ಮಾರ್ಗವಾಗಿ ಹುಟ್ಟೂರಿಗೆ ತಡರಾತ್ರಿ ಪಾರ್ಥೀವ ಶರೀರ ಆಗಮಿಸಿತ್ತು. ಪಾರ್ಥೀವ ಶರೀರ ಗ್ರಾಮಕ್ಕೆ ಪ್ರವೇಶ ಮಾಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ವೀರ ಯೋಧ ಬಸಪ್ಪ ಭಜಂತ್ರಿರಿಗೆ ಪತ್ನಿ ಹಾಗೂ ಮೂರು ಜನ ಮಕ್ಕಳಿದ್ದಾರೆ. ಬಸಪ್ಪ ಸೇವಾವಧಿಯ 20 ವರ್ಷ ಪೂರೈಸಿದ ನಂತರ ಸ್ವಯಂ ನಿವೃತ್ತಿ ಪಡೆಯಬಹುದಿತ್ತು. ಆದರೆ ಕುಟುಂಬ ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿ ಬಸಪ್ಪನ ಸ್ವಯಂ ನಿವೃತ್ತಿ ತೆಗೆದುಕೊಂಡಿರಲಿಲ್ಲ. ನಂತರ ಸೇವೆ ಮುಂದುವರಿಸಿದ ಬಸಪ್ಪ ಅವರು ಇತ್ತೀಚಿಗೆ ಮತ್ತೆ ಎರಡು ವರ್ಷ ಸೇವಾವಧಿಯನ್ನು ಮುಂದುವರೆಸಲು ಬರೆದುಕೊಟ್ಟಿದ್ದರು. ಕೊನೆಗೆ ಆ ವಿಧಿ ಸೇವೆಯಲ್ಲಿದ್ದಾಗಲೇ ಬಸಪ್ಪರನ್ನು ಇಹಲೋಕಕ್ಕೆ ಕರೆಸಿಕೊಂಡಿದೆ. ಇನ್ನೂ ಗ್ರಾಮಕ್ಕೆ ಆಗಮಿಸಿದ ಪಾರ್ಥಿವ ಶರೀರವನ್ನು ಗ್ರಾಮದ ಶಾಲೆಯಲ್ಲಿ ಸಾರ್ವಜನಿಕರ ದರ್ಶಕ್ಕೆ ಇಡಲಾಗಿತ್ತು.