– ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ ಪೊಲೀಸರು
ಲಕ್ನೋ: 20 ವರ್ಷದ ಆಸುಪಾಸಿನ ವಿಧವೆಯನ್ನು ಆಕೆಯ ತಂದೆ ಹಾಗೂ ಅತ್ತೆ ಹಣದ ಆಸೆಗಾಗಿ ಮಾರಾಟ ಮಾಡಿದ್ದು, ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಇದರಿಂದ ನೊಂದ ಸಂತ್ರಸ್ತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಹೌದು. ಹಣದ ಆಸೆಗಾಗಿ ಮಗಳನ್ನು ತಂದೆ 10,000 ರೂಗೆ ಮಾರಾಟ ಮಾಡಿದ್ದಾನೆ. ನಂತರ ಆಕೆಯನ್ನು ಇಟ್ಟುಕೊಂಡಿದ್ದ ವ್ಯಕ್ತಿ ಹಾಗೂ ಆತನ ಸ್ನೇಹಿತರು ಸೇರಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಈ ಬಗ್ಗೆ ಸಂತ್ರಸ್ತೆ ದೂರು ನೀಡಲು ಹೋದಾಗ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಇದರಿಂದ ನೊಂದ ಸಂತ್ರಸ್ತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಪರಿಣಾಮ ಆಕೆಯ ದೇಹ ಶೇ. 80ರಷ್ಟು ಸುಟ್ಟು ಹೋಗಿದೆ. ಸದ್ಯ ಸಂತ್ರಸ್ತೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ.
Advertisement
Advertisement
ಮಹಿಳೆ ಮೂಲತಃ ಉತ್ತರಪ್ರದೇಶದ ಹಾಪೂರ್ ನವರಾಗಿದ್ದು, ಪತಿ ತೀರಿಕೊಂಡ ಬಳಿಕ ಆಕೆಯನ್ನು ಮಾರಾಟ ಮಾಡಲಾಗಿತ್ತು. ಈಕೆಯನ್ನು ಕೊಂಡ ವ್ಯಕ್ತಿ ಹಲವು ಮಂದಿಯಿಂದ ಸಾಲ ಪಡೆದುಕೊಂಡು ನಂತರ ಅವರ ಮನೆಗೆ ಕೆಲಸಕ್ಕಾಗಿ ಈಕೆಯನ್ನು ಕಳುಹಿಸುತ್ತಿದ್ದನು. ಅಲ್ಲಿ ಈಕೆ ಪ್ರತಿ ಬಾರಿಯೂ ದೌರ್ಜನ್ಯ ಹಾಗೂ ಅತ್ಯಾಚಾರಕ್ಕೊಳಗಾಗುತ್ತಿದ್ದಳು.
Advertisement
ಘಟನೆ ಸಂಬಂಧಿಸಿದಂತೆ ತಿಂಗಳ ಬಳಿಕ ಇತ್ತೀಚೆಗೆ ಅಂದರೆ ಭಾನುವಾರ ಹಾಪೂರ್ ಎಸ್‍ಪಿ ಯಶ್ವೀರ್ ಸಿಂಗ್ 14 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇತ್ತ ದೆಹಲಿಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಳಿವಾಲ್ ಪ್ರಕರಣ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದು, ಅದರಲ್ಲಿ ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.
Advertisement
ಸಂತ್ರಸ್ತೆ ಅತ್ಯಾಚಾರಿಗಳಿಂದ ಮಾತ್ರವಲ್ಲ, ಅತ್ಯಾಚಾರ ಮಾಡಿದವರ ವಿರುದ್ಧ ಎಫ್‍ಐಆರ್ ದಾಖಲಿಸಲು ನಿರಾಕರಿಸಿದ ಉತ್ತರ ಪ್ರದೇಶದ ಪೊಲೀಸರಿಂದ ಕೂಡ ಕಿರುಕುಳ ಅನುಭವಿಸಿದ್ದಾರೆ. ಇದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಅಲ್ಲದೆ ಸಂತ್ರಸ್ತೆ ದೂರು ನೀಡಲು ಹೋದಾಗ ಅದನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಪೊಲೀಸರಿಗೆ ನಾಚಿಕೆಯಾಗಬೇಕು. ಆಕೆ ದಹನ ಮಾಡಿಕೊಳ್ಳಲು ಯತ್ನಿಸಲು ಉತ್ತರ ಪ್ರದೇಶದ ಪೊಲೀಸರೂ ಕಾರಣರಾಗಿದ್ದಾರೆ ಎಂದು ಸ್ವಾತಿ ಅವರು ಪತ್ರದಲ್ಲಿ ದೂರಿದ್ದಾರೆ.
ಪ್ರಕರಣ ಸಂಬಂಧ ನಿಖರವಾಗಿ ತನಿಖೆ ನಡೆಸಬೇಕು. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ವಾತಿ ಅವರು ಹಾಪೂರ್ ಪೊಲೀಸರನ್ನು ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, ಪ್ರಕರಣ ಸಂಬಂಧ 14 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಸಂತ್ರಸ್ತೆ ಪೊಲೀಸರ ಬಳಿ ಹೇಳಿಕೊಂಡರೂ, ಪೊಲೀಸರು ಮಾತ್ರ ಹಣ ಪಡೆದುಕೊಂಡು ಪ್ರಕರಣವನ್ನು ಗಾಳಿಗೆ ತೂರಿದ್ದಾರೆ.