ಸೂರ್ಯಗ್ರಹಣ: ರಾಷ್ಟ್ರದ ಗಮನ ಸೆಳೆದ ಕೊಡಗಿನ ಪುಟ್ಟ ಗ್ರಾಮ

Public TV
2 Min Read
MDK GRAHANA 3 copy

– ಕುಟ್ಟದ ಕಾಯಮಾನಿಯಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಸಜ್ಜುಗೊಂಡ ಪ್ರದೇಶ

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ `ಕುಟ್ಟ’ ಗ್ರಾಮವು ಈಗ ರಾಷ್ಟ್ರದ ಖಗೋಳ ವಿಜ್ಞಾನಿಗಳ ಗಮನ ಸೆಳೆದಿದೆ.

ಕುಟ್ಟ ಗ್ರಾಮದತ್ತ ಎಲ್ಲರ ಗಮನವೂ ಕೇಂದ್ರಿಕೃತವಾಗಿದೆ. ಡಿ.26ರಂದು ನಡೆಯುವ ಸೂರ್ಯ ಗ್ರಹಣವು ದಕ್ಷಿಣ ಭಾರತದಲ್ಲಿ ಅದರಲ್ಲೂ ಕುಟ್ಟದ ಕಾಯಮಾನಿ ಪ್ರದೇಶದಲ್ಲಿ ವಿಶೇಷವಾಗಿ ಗೋಚರಿಸುವ ಕಾರಣಕ್ಕೆ ವಿಜ್ಞಾನಿಗಳ ಆಸಕ್ತಿಯ ಪ್ರದೇಶವಾಗಿದೆ. ದೇಶದ ಇತರೆ ಭಾಗದಲ್ಲಿ ಸೂರ್ಯಗ್ರಹಣದ ಪ್ರಮಾಣವು ಬೇರೆ ಬೇರೆ ರೀತಿಯಿದ್ದರೆ, ಕೊಡಗಿನ ಕುಟ್ಟದಲ್ಲಿ ಶೇ.100ರಷ್ಟು ಸೂರ್ಯಗ್ರಹಣ ಗೋಚರಿಸಲಿದೆ ಎಂಬುದು ಖಗೋಳಾಸಕ್ತರ ಮಾಹಿತಿ. ಇದನ್ನೂ ಓದಿ: ಡಿಸೆಂಬರ್ 26ಕ್ಕೆ ಕೇತುಗ್ರಸ್ಥ ಸೂರ್ಯಗ್ರಹಣ

MDK GRAHANA 2 copy

ಹೀಗಾಗಿ, ವಿಸ್ಮಯ ವೀಕ್ಷಣೆ ಹಾಗೂ ಅಧ್ಯಯನಕ್ಕೆ ದೇಶದ ಹಲವೆಡೆಯಿಂದ ಖಗೋಳ ವಿಜ್ಞಾನಿಗಳು ಈ ಪ್ರದೇಶಕ್ಕೆ ಬರುತ್ತಿದ್ದಾರೆ. ಗ್ರಹಣ ವೀಕ್ಷಣೆಗೆ, ಪುಣೆಯ ಖಗೋಳ ಮತ್ತು ಪರಿಸರ ಕೇಂದ್ರದ ವಿಜ್ಞಾನಿಗಳ ತಂಡವು ವಿಶೇಷ ವ್ಯವಸ್ಥೆ ಮಾಡುತ್ತಿದೆ. ಗ್ರಹಣದ ಬಗ್ಗೆ ಜಾಗೃತಿ ಮೂಡಿಸಲು ಒಂದು ಸಾವಿರ ವಿದ್ಯಾರ್ಥಿಗಳನ್ನು ಕರೆಸಲಾಗುತ್ತಿದೆ. ಕೊಡಗು, ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳು ಗ್ರಹಣ ವೀಕ್ಷಣೆಗೆ ಬರಲಿದ್ದಾರೆ. ಅದಕ್ಕಾಗಿಯೇ ಕಾಫಿ ತೋಟದ ಪಕ್ಕವೇ ವಿಶಾಲ ಮೈದಾನ ಸಜ್ಜುಗೊಳಿಸಲಾಗಿದ್ದು ಬಂದವರು ಸೌರ ಕನ್ನಡಕದ ಮೂಲಕವೇ ಈ ವಿಸ್ಮಯ ಕಣ್ತುಂಬಿಕೊಳ್ಳಬಹುದಾಗಿದೆ.

ಕುಟ್ಟ, ಬಿರುನಾಣಿ ಪ್ರದೇಶಗಳು ಪೂರ್ಣ ಪ್ರಮಾಣದ ಗ್ರಹಣ ಗೋಚರಿಸುವ ರೇಖೆಯಲ್ಲಿದ್ದು, ಈ ಪ್ರದೇಶಗಳು ವಿಜ್ಞಾನಿಗಳ ಆಸಕ್ತಿಯ ತಾಣಗಳಾಗಿವೆ. 26ರಂದು ಬೆಳಗ್ಗೆ 8.05ರಿಂದ 11ರ ತನಕ ಸೂರ್ಯಗ್ರಹಣ ಸಂಭವಿಸಲಿದೆ. ಬೆಳಗ್ಗೆ 9ರಿಂದ 9.30ರ ನಡುವೆ ಈ ಸ್ಥಳದಲ್ಲಿ ಪೂರ್ಣ ಪ್ರಮಾಣದಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ. ಬೆಂಗಳೂರಿನಲ್ಲಿ ಶೇ.89.4, ಚೆನ್ನೈನಲ್ಲಿ ಶೇ.84, ಮುಂಬೈನಲ್ಲಿ ಶೇ.78ರಷ್ಟು ಸೂರ್ಯಗ್ರಹಣವಿದ್ದರೆ, ಕೊಡಗಿನ ಕುಟ್ಟದಲ್ಲಿ ಶೇ.99ರಿಂದ ಶೇ.100ರಷ್ಟು ಗ್ರಹಣ ಕಾಣಬಹುದು ಎನ್ನುತ್ತಾರೆ ವಿಜ್ಞಾನಿಗಳು.

MDK GRAHANA copy 1

ಸೌರ ಕನ್ನಡಕ ವಿತರಣೆ
ದಕ್ಷಿಣ ಭಾರತದಲ್ಲಿ ಇಂತಹ ಸೂರ್ಯಗ್ರಹಣ ವೀಕ್ಷಣೆಗೆ ಬಹಳ ವರ್ಷವೇ ಕಾಯಬೇಕು. ಹೀಗಾಗಿ, ಈ ಅಪರೂಪದ ವಿಸ್ಮಯವನ್ನು ಯಾರೂ ತಪ್ಪಿಸಿಕೊಳ್ಳಬಾರದು. ಹೀಗಾಗಿ ಜಿಲ್ಲಾ ವಿಜ್ಞಾನ ಪರಿಷತ್ ವತಿಯಿಂದ ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ಸೌರ ಕನ್ನಡ ವಿತರಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಶಾಲಾ ಕಾಲೇಜುಗಳಿಗೆ ತೆರಳಿ ಸೂರ್ಯ ಗ್ರಹಣವನ್ನು ಹೇಗೆ ವೀಕ್ಷಿಸಬಹುದು ಎಂದು ಸೌರ ಕನ್ನಡಕವನ್ನು ನೀಡಿ ಮಕ್ಕಳಿಗೆ ಹಾಗೂ ದೊಡ್ಡವರಿಗೆ ತಿಳಿಸಲಾಗಿದೆ. ಅಲ್ಲದೆ ಮೂಢ ನಂಬಿಕೆಗಳ ಬಗ್ಗೆ ಸಹ ಅರಿವು ಮೂಡಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *