ಉಡುಪಿ: ಕೇತುಗ್ರಸ್ಥ ಕಂಕಣ ಸೂರ್ಯಗ್ರಹಣದ ಸಂದರ್ಭ ಉಡುಪಿಯ ಕೃಷ್ಣ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಕೃಷ್ಣ ದೇವರ ದರ್ಶನ ಮಾಡಿದರು.
ದೇವಾಲಯದ ಬಾಗಿಲು ಮುಚ್ಚದೇ ಇದ್ದ ಕಾರಣ ಭಕ್ತರಿಗೆ ಅನುಕೂಲವಾಯಿತು. ಗ್ರಹಣಕಾಲದಲ್ಲಿ ಮಠಾಧೀಶರು ಪುಣ್ಯಸ್ನಾನ ಕೈಗೊಂಡರು. ಪರ್ಯಾಯ ಪಲಿಮಾರು ಸ್ವಾಮೀಜಿ ಹಾಗೂ ಉತ್ತರಾಧಿಮಠಾಧೀಶರ ನೇತೃತ್ವದಲ್ಲಿ ಸಾವಿರಾರು ಭಕ್ತರು ಮಧ್ವ ಸರೋವರದಲ್ಲಿ ಮಿಂದೆದ್ದರು. ಸರೋವರದ ಸುತ್ತಲೂ ಕುಳಿತು ಜಪತಪ ಪಾರಾಯಣಗಳನ್ನು ಮಾಡಿದರು.
Advertisement
Advertisement
ಕೃಷ್ಣನಿಗೆ ನೈರ್ಮಲ್ಯ ವಿಸರ್ಜನಾ ಪೂಜೆಯ ನಂತರ ಯಾವುದೇ ಅಲಂಕಾರ ಮಾಡಿರಲಿಲ್ಲ. ಗ್ರಹಣ ಮೋಕ್ಷದ ಬಳಿಕ ದೇವರಿಗೆ ಮಹಾಪೂಜೆ ನಡೆಸಿ ಭಕ್ತರಿಗೆ ಅನ್ನ ಪ್ರಸಾದ ಬಡಿಸಲಾಗುತ್ತದೆ. ಗ್ರಹಣ ಕಾಲದಲ್ಲಿ ಮಠದೊಳಗೆ ಪೂಜೆ, ಹೋಮ ನಡೆದವು. ಗ್ರಹಣದ ವೇಳೆಯಲ್ಲೇ ಆಗಸದಲ್ಲಿ ಕಾಮನಬಿಲ್ಲು ಕಾಣಿಸಿಕೊಂಡು ನೋಡುಗರ ಗಮನ ಸೆಳೆದಿದ್ದು ವಿಶೇಷವಾಗಿತ್ತು.