ಮಡಿಕೇರಿ: ಕಟ್ಟಡ ನಿರ್ಮಾಣ ವೇಳೆ ಮಣ್ಣು ಕುಸಿದು ಸ್ಥಳದಲ್ಲಿಯೇ ಇಬ್ಬರು ಮಹಿಳಾ ಕಾರ್ಮಿಕರು ಮೃತಪಟ್ಟ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಹಾಸನ ಜಿಲ್ಲೆ ಹಳೇಬೀಡು ಮೂಲದ ಕಾರ್ಮಿಕರಾದ ಗೌರಮ್ಮ (40), ಯಶೋಧ(20) ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಮಡಿಕೇರಿ ನಿವಾಸಿ ಸುಬ್ಬಯ್ಯ ಎಂಬವರ ಮನೆ ಕಟ್ಟಡ ನಿರ್ಮಾಣ ವೇಳೆ ಈ ಅವಘಡ ಸಂಭವಿಸಿದೆ. ಮತ್ತೋರ್ವ ಕಾರ್ಮಿಕ ವೆಂಕಟಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಳೇಬೀಡು ಮೂಲದ ಕಾರ್ಮಿಕರು ಹೊಟ್ಟೆ ಪಾಡಿಗಾಗಿ ಮಡಿಕೇರಿಯ ರಾಜಾ ಸೀಟ್ ಬಳಿ ಮಣ್ಣಿನ ಕೆಲಸಕ್ಕೆ ಬಂದಿದ್ದರು. ಮಡಿಕೇರಿ ನಗರದ ಗೌಳಿ ಬೀದಿಯಲ್ಲಿನ ಸುಬ್ಬಯ್ಯ ಅವರ ಮನೆಯಲ್ಲಿ ಒಟ್ಟು 6 ಜನ ಇಂದು ತಳಪಾಯನ್ನು ತೆಗೆಯುತ್ತಿದ್ದರು. ಈ ವೇಳೆ ಬರೆ ಕುಸಿದು ನಾಲ್ವರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಅವರಲ್ಲಿ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟರೆ, ಓರ್ವ ಮಹಿಳೆ ಹಾಗೂ ಓರ್ವ ಪುರುಷ ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ಪಾರಾಗಿದ್ದಾರೆ.
ಬದುಕುಳಿದ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರಲ್ಲಿ ವೆಂಕಟಸ್ವಾಮಿ ಸ್ಥಿತಿ ಚಿಂತಾಜನಕವಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಮೃತಪಟ್ಟ ಮಹಿಳೆಯರಿಗೆ ಹಾಗೂ ಗಾಯಗೊಂಡವರಿಗೆ ಪರಿಹಾರ ಕೊಡಿಸಲಾಗುತ್ತದೆ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ನಿವೃತ್ತ ಮಡಿಕೇರಿ ನಿರೀಕ್ಷಕ ಅನೂಪ್ ಮಾದಪ್ಪ ಭರವಸೆ ನೀಡಿದ್ದಾರೆ.
ಬರೆಯ ಮಣ್ಣಿನಲ್ಲಿ ಸಿಲುಕಿ ಬದುಕುಳಿದ ಮಹಿಳೆ ಮಾತನಾಡಿ, ಕೆಲಸವನ್ನು ಮುಗಿಸಿ ಇನ್ನೊಂದು 10 ಬುಟ್ಟಿ ಮಣ್ಣು ಬಾಕಿ ಇತ್ತು. ಅದನ್ನು ಎತ್ತಿ ಹಾಕಿ ಹೋಗೋಣ ಅಂದುಕೊಂಡಿದ್ದೇವು. ಮಣ್ಣ ತೆಗೀತಾ ಇದ್ದಾಗ ಕಣ್ಣು ಮುಚ್ಚಿ ಬಿಡೋದರೋಳಗೆ ಬರೆ ಕುಸಿಯಿತು. ಸತ್ತವರಲ್ಲಿ ಒಬ್ಬಳಿಗೆ ಎರಡು ಪುಟ್ಟ ಮಕ್ಕಳಿದ್ದಾರೆ. ಇನ್ನೊಬ್ಬಳಿಗೆ ಮದುವೆಯಾಗಿ ಕೇವಲ 6 ತಿಂಗಳು ಆಗಿದೆ ಎಂದು ದು:ಖ ತೋಡಿಕೊಂಡರು.
ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್, ಅಗ್ನಿಶಾಮಕ ದಳ ಸಿಬ್ಬಂದಿ ಮಣ್ಣಿನ ಅಡಿ ಸಿಲುಕಿಕೊಂಡಿದ್ದ ಗೌರಮ್ಮ ಹಾಗೂ ಯಶೋಧ ಅವರ ಮೃತದೇಹವನ್ನು ಹೊರ ತೆಗೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವೆಂಕಟಸ್ವಾಮಿ ಅವರನ್ನು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv