ಬಾಗಲಕೋಟೆ: ಕೊರೊನಾ ಸಾವು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವನ ಮೇಲೆ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ನಿವಾಸಿ ಡಿ.ವಿ ಪತ್ತಾರನ ವಿರುದ್ಧ ಪ್ರಕರಣ ದಾಖಲಾಗಿದೆ. ಜಮಖಂಡಿ ತಾಲ್ಲೂಕಿನ ಅಡಿಹುಡಿ ಗ್ರಾಮದ ತೋಟದ ಮನೆಯವನು ಸೊಲ್ಲಾಪುರದಿಂದ ಬಂದಿದ್ದಾನೆ. ಆತನಿಗೆ ಕೊರೊನಾ ಸೋಂಕು ಇದೆ. ಆದರೆ ಯಾರೂ ತಪಾಸಣೆ ಮಾಡಿಲ್ಲ ಎಂಬ ಆಡಿಯೋ ಸಂಭಾಷಣೆ ರೆಕಾರ್ಡ್ ಮಾಡಿ, ಯಾವುದೋ ಮನೆಯ ವಿಡಿಯೋ ಮಾಡಿ ಡಿ.ವಿ ಪತ್ತಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದನು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಈ ಬಗ್ಗೆ ತಿಳಿಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 505 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.