ಚಿಕ್ಕೋಡಿ: ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ರಚನೆಯಾದ ನಂತರ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಫೇಸ್ ಬುಕ್ ನಲ್ಲಿ ಪ್ರಕಟಿಸಿದ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.
“ಮೂರು ಬಿಟ್ಟ ಅನರ್ಹರಿಗೆ ಅಧಿಕಾರ, ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಚಾರ, ಅನುಭವಿಸೋದು ಜನರ ಗ್ರಹಚಾರ” ಎಂದು ಬೆಳಗಾವಿ ಜಿಲ್ಲೆ ಅಪರಾಧ ದಳದ ಪಿಎಸ್‍ಐ ಉದ್ದಪ್ಪ ಕಟ್ಟಿಕರ ಅವರು ಫೇಸ್‍ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದ ನಿವಾಸಿಯಾಗಿರುವ ಉದ್ದಪ್ಪ ಅವರು “ಜಾತ್ಯತೀತರ ಸೋಗಿನಲ್ಲಿ ಜಾತಿವಾದಿಗಳು, ಮತ್ತು ಕೋಮುವಾದಿಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಮೇ 15 ರಂದು “ನೈತಿಕ ಅಧಃಪತನದ ಪರಮಾವಧಿಗೆ ಸಾಕ್ಷಿ ಇಂದಿನ ಕರ್ನಾಟಕದ ಘಟನಾವಳಿ” ಎಂದು ಬರೆದರೆ ಮೇ 23 ರಂದು “ದೇಶದ್ರೋಹಿಗಳು ಒಂದಾದ ದಿನ ಈ ದಿನ” ಎಂದು ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
“ಯೋಗ್ಯರಿಂದ ಪ್ರಗತಿ, ಆಯೋಗ್ಯರಿಂದ ಅವನತಿ, ಆಯ್ಕೆ ನಮ್ಮ ಕೈಯಲ್ಲಿ” ಎಂದು ಒಂದು ಪೋಸ್ಟ್ ಹಾಕಿದ್ದರೆ “ದೇಶಕ್ಕಾಗಿ ದುಡಿಯುವವರು ಒಂದು ಕಡೆ ಅಧಿಕಾರಕ್ಕೆ ಮೈತ್ರಿ ಮಾಡಿಕೊಳ್ಳುವವರು ಒಂದು ಕಡೆ ಎತ್ತು ಏರಿಗೆ ಎಳೆದರೆ ಕೋಣ ನೀರಿಗೆಳೆದಂತೆ” ಎಂದು ಇನ್ನೊಂದು ಪೋಸ್ಟ್ ಪ್ರಕಟಿಸಿದ್ದಾರೆ. ಈ ಪೋಸ್ಟ್ ಗಳಿಗೆ ಜನರು ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ಈ ರೀತಿ ಬರೆದುಕೊಂಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ಟೀಕಿಸಿದ್ದಾರೆ.
ಪ್ರಸ್ತುತ ಈಗ ಬೆಳಗಾವಿ ಕಾಂಗ್ರೆಸ್ ಶಾಸಕಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು 2016 ರಲ್ಲಿ ಉದ್ದಪ್ಪ ಕಟ್ಟಿಕರ್ ಅವರಿಗೆ ಕರೆ ಮಾಡಿದ್ದ ಬೈದಿದ್ದ ಆಡಿಯೋ ಈ ಹಿಂದೆ ವೈರಲ್ ಆಗಿತ್ತು.
https://www.youtube.com/watch?v=on0BtQqB7Ew