ವಿಧಾನಸಭೆ ಕಲಾಪಕ್ಕೆ ನೂರಾರು ಶಾಸಕರು ಚಕ್ಕರ್ – ಸಹಿ ಮಾಡಿ ಶಾಸಕರು ಹೋಗೋದು ಎಲ್ಲಿಗೆ..?

Public TV
2 Min Read
ASSEMBLY SESSION

ಬೆಂಗಳೂರು: ಕೋಟಿಗಟ್ಟಲೇ ಖರ್ಚು ಮಾಡಿ ವಿಧಾನಮಂಡಲ ಅಧಿವೇಶನ ನಡೆಸುತ್ತಾರೆ. ಜನರ ತೆರಿಗೆ ದುಡ್ಡು ಮಾತ್ರ ಖಾಲಿ ಆಗುತ್ತೆ, ಅಧಿವೇಶನಕ್ಕೆ ಮಾತ್ರ ಶಾಸಕರು ಡೋಂಟ್ ಕೇರ್ ಅಂತಾರೆ. ವಿಧಾನಸಭೆ ಕಲಾಪಕ್ಕೆ ಶಾಸಕರ ನಿರಾಸಕ್ತಿ ಎದ್ದು ಕಾಣ್ತಿದೆ. ಕಲಾಪದಲ್ಲಿ ಆಡಳಿತ ಮತ್ತು ವಿಪಕ್ಷಗಳ ಶಾಸಕರ ಹಾಜರಾತಿಗೆ ಬರ ಬಂದಿದೆ. ಇಂದು ಬೆಳಗ್ಗೆ ಕಲಾಪದಲ್ಲಿ 224 ಶಾಸಕರಲ್ಲಿ ಕಲಾಪಕ್ಕೆ ಹಾಜರಾದ ಶಾಸಕರ ಸಂಖ್ಯೆ 80 ಅನ್ನು ದಾಟಿಲ್ಲ. ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆ ನಡೆದ್ರೂ ಕೆಲವರಷ್ಟೇ ಭಾಗವಹಿಸ್ತಿದ್ದಾರೆ. ಇನ್ನು ಕೆಲ ಶಾಸಕರು ವಿಧಾನಸಭೆಗೆ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಕಲಾಪದಿಂದ ಮಾಯ ಆಗ್ತಿದ್ದಾರೆ.

ASSEMBLY SESSION 1

ಇನ್ನೊಂದೆಡೆ ಭೋಜನ ನಂತರ ಕಲಾಪ ಆರಂಭಕ್ಕೆ ಮುಕ್ಕಾಲು ಗಂಟೆ ಬೆಲ್ ಹೊಡೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಮೂಕ್ಕಾಲು ಗಂಟೆ ಬೆಲ್ ಹೊಡೆದ್ರೂ ಕೋರಂಗೆ ಅಗತ್ಯ ಇರುವಷ್ಟು ಶಾಸಕರು ಆಗಮಿಸಲಿರಲಿಲ್ಲ. ಮಧ್ಯಾಹ್ನದ ಬಳಿಕವೂ ಕಲಾಪದಲ್ಲೂ ಶಾಸಕರ ನಿರಾಸಕ್ತಿ ಇತ್ತು. ಆಡಳಿತ, ವಿಪಕ್ಷಗಳ ಶಾಸಕರ ಹಾಜರಾತಿ ಸಂಖ್ಯೆ 60ಅನ್ನು ದಾಟಿರಲಿಲ್ಲ. ಇನ್ನು ಕಲಾಪದಲ್ಲಿ ಮಂತ್ರಿಗಳು ಕೂಡ ಗೈರಾಗಿದ್ರು. ಮಧ್ಯಾಹ್ನದ ಬಳಿಕ ಕಲಾಪ ಆರಂಭವಾದಾಗ ಕೇವಲ ಇಬ್ಬರು ಮಂತ್ರಿಗಳು ಮಾತ್ರ ಇದ್ದಾರೆ ಎಂದು ಕಾಂಗ್ರೆಸ್ ಉಪನಾಯಕ ಖಾದರ್ ತಿವಿದ್ರು. ಆಗ ಮಧ್ಯಪ್ರವೇಶ ಮಾಡಿದ ಸಚಿವ ಆರ್.ಅಶೋಕ್ ವಿರೋಧ ಪಕ್ಷದವರು ಆಡಳಿತ ಪಕ್ಷದವರ ಕಿವಿ ಹಿಂಡಬೇಕು. ಆದರೆ ಕಿವಿ ಹಿಂಡುವ ಕೈಗಳೇ ಇಲ್ಲ ಎಂದು ಮಂತ್ರಿಗಳ ಗೈರು ಹಾಜರಿಯನ್ನ ಹಾಸ್ಯದ ರೂಪದಲ್ಲಿ ಸಮರ್ಥನೆ ಮಾಡಿಕೊಂಡ್ರು. ಆಗ ತಿರುಗೇಟು ಕೊಟ್ಟ ಖಾದರ್ ನಮ್ಮಲ್ಲಿ ಪ್ರಶ್ನೆ ಕೇಳುವವರಿದ್ದರೆ ಬರ್ತಾರೆ, ಕೋರಂ ಮಾಡುವ ಜವಾಬ್ದಾರಿ ನಿಮ್ದು ಎಂದ್ರು. ಈ ನಡುವೆ ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶಂಪುರ್ ಮೂರು ಪಕ್ಷದ ಚೀಫ್ ವಿಪ್ ಗಳನ್ನ ಕರೆದು ಸದನದಲ್ಲಿ ಎಲ್ಲಾ ಶಾಸಕರು ಕಡ್ಡಾಯ ಹಾಜರಾಗಬೇಕು ಎಂದು ಆದೇಶಿಸಿ ಅಂತಾ ಮನವಿ ಮಾಡಿದ್ರು.

ASSEMBLY SESSION 2

ಇನ್ನೊಂದೆಡೆ ಸಚಿವರ ಗೈರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗರಂ ಆಗಿದ್ರು. ಮಾಜಿ ಸಿಎಂ ಯಡಿಯೂರಪ್ಪ ಹಾಜರಾತಿಗೆ ಭೇಷ್ ಎಂದು ಸಚಿವರನ್ನ ತರಾಟೆಗೆ ತೆಗೆದುಕೊಂಡರು. ಯಡಿಯೂರಪ್ಪ ಬಿಟ್ರೆ ಇನ್ಯಾರಿಗೂ ಜವಾಬ್ದಾರಿ ಇಲ್ಲ, ಸದಸ್ಯರು ಚರ್ಚೆ ಮಾಡುವಾಗ ಸಚಿವರು ಇರಬೇಕು, ಬರೆದುಕೊಳ್ಳಬೇಕು. ಸಂಬಂಧಪಟ್ಟ ಸಚಿವರಿಲ್ಲದಿದ್ರೆ ಬೇರೆ ಸಚಿವರು ಬರೆದುಕೊಳ್ಳಬೇಕು. ಇಲ್ಲದಿದ್ರೆ ಸಚಿವರು ಹೇಗೆ ಉತ್ತರ ಕೊಡ್ತಾರೆ..? ಸಚಿವರೇ ಇಲ್ಲದೆ ಮೇಲೆ ಏಕೆ ಚರ್ಚೆ ಮಾಡ್ಬೇಕು. ಯಡಿಯೂರಪ್ಪ ಮಾತ್ರ ಕಲಾಪದಲ್ಲಿ ಇರ್ತಾರೆ. ಯಡಿಯೂರಪ್ಪಗೆ ಇರುವ ಜವಾಬ್ದಾರಿ ಬೇರೆಯವ್ರಿಗೆ ಇಲ್ಲ ಅಂತಾ ಸಿದ್ದರಾಮಯ್ಯ ಗುಡುಗಿದ್ರು.

ASSEMBLY SESSION 5

ಇದೆಲ್ಲದರ ನಡುವೆ ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆ ನಡೆಯುತ್ತಿದ್ದರೆ ಸಿನಿಮಾ ಶೂಟಿಂಗ್ ನಲ್ಲಿ ಸಚಿವ ಬಿ.ಸಿ.ಪಾಟೀಲ್ ಬ್ಯುಸಿ ಆಗಿದ್ರಂತೆ. ಇವತ್ತು ಕಲಾಪಕ್ಕೆ ಸಾಹೇಬ್ರು ಗೈರು ಹಾಜರಾಗಿದ್ರು. ಮಿನಿಸ್ಟರ್ ಅಧಿವೇಶನದ ಶೆಡ್ಯೂಲ್ ಗಿಂತ ಶೂಟಿಂಗ್ ಶೆಡ್ಯೂಲ್ ಹೆಚ್ಚಾಯ್ತಾ..? ಅಧಿವೇಶನದ ವೇಳೆಯೇ ಬಣ್ಣ ಹಚ್ಚುವ ಐಡಿಯಾ ಯಾರದ್ದು..? ಎಂದು ಆಡಳಿತ ಪಕ್ಷದ ಕೆಲ ಶಾಸಕರು ಮಾತನಾಡಿಕೊಳ್ತಿದ್ರು. ಇದನ್ನೂ ಓದಿ: ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಬೋಧಿಸುವ ಶಿಕ್ಷಣ ಅಗತ್ಯತೆ ಇದೆ: ವಿಶ್ವೇಶ್ವರ ಹೆಗಡೆ ಕಾಗೇರಿ

ASSEMBLY SESSION 3

ಒಟ್ನಲ್ಲಿ ಶಾಸಕರಿಗೆ ಆಸಕ್ತಿ ಇಲ್ಲದ ಮೇಲೆ ವಿಧಾನಸಭೆ ಕಲಾಪ ಏಕೆ..? ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆಯನ್ನಾದ್ರೂ ಮಾಡಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಬಾರದಾ..? ಕೋಟಿಗಟ್ಟಲೇ ಖರ್ಚು ಮಾಡಿ ಅಧಿವೇಶನ ನಡೆಸುವುದು ಯಾರಿಗಾಗಿ..? ಎಂಬ ಪ್ರಶ್ನೆಗೆ ಜನಪ್ರತಿನಿಧಿಗಳೇ ಉತ್ತರಿಸಬೇಕು. ಇದನ್ನೂ ಓದಿ: ಉಕ್ರೇನ್‍ನಿಂದ ಹಿಂದಿರುಗಿದ ವೈದ್ಯ ವಿದ್ಯಾರ್ಥಿಗಳಿಗೆ 60 ಮೆಡಿಕಲ್ ಕಾಲೇಜುಗಳಲ್ಲಿ ಉಚಿತ ಕಲಿಕೆಗೆ ಅವಕಾಶ: ಸುಧಾಕರ್

Share This Article
Leave a Comment

Leave a Reply

Your email address will not be published. Required fields are marked *