– ಬಹಳಷ್ಟು ಬಾರಿ ಹೃದಯ ಒಡೆದಿತ್ತು
ಮುಂಬೈ: ಚೊಚ್ಚಲ ಮಹಿಳಾ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಆಗಿ ಭಾರತ (Team India) ಹೊಮ್ಮಿದೆ. ಫೈನಲ್‌ನಲ್ಲಿ ಆಫ್ರಿಕಾ (South Africa) ವಿರುದ್ಧ 52 ರನ್‌ಗಳ ಜಯ ಸಾಧಿಸಿ ಮೊದಲ ಬಾರಿಗೆ ವಿಶ್ವಕಪ್‌ಗೆ ಮುತ್ತಿಕ್ಕಿದೆ. ಈ ಮೂಲಕ 47 ವರ್ಷಗಳ ಪ್ರಶಸ್ತಿಯ ಬರ ನೀಗಿಸಿಕೊಂಡಿದೆ.
ಐತಿಹಾಸಿಕ ಜಯದ ಬಳಿಕ ಮಾತನಾಡಿದ ಸ್ಮೃತಿ ಮಂಧಾನ (Smriti Mandhana), ಈ ಹಿಂದೆ ಹಲವು ಬಾರಿ ಹೃದಯ ಒಡೆದಿತ್ತು ಎಂದು ಭಾವುಕರಾದರು.

ಪ್ರತಿ ವಿಶ್ವಕಪ್‌ನಲ್ಲೂ ನಮಗೆ ಒಂದಿಲ್ಲೊಂದು ಹೃದಯವಿದ್ರಾವಕ ಘಟನೆಗಳು ಸಂಭವಿಸುತ್ತಿತ್ತು. ಆದಾಗ್ಯೂ ನಾವು ಉತ್ಸಾಹ ಕಳೆದುಕೊಂಡಿರಲಿಲ್ಲ. ವಿಶ್ವಕಪ್ ಗೆಲ್ಲುವ ಜವಾಬ್ದಾರಿಯೊಂದಿಗೆ ಮಹಿಳಾ ಕ್ರಿಕೆಟ್ ಅನ್ನು ಇನ್ನಷ್ಟು ಬೆಳೆಸುವುದನ್ನ ಮುಂದುವರಿಸಿದ್ವಿ. ಕಳೆದ ಒಂದೂವರೆ ತಿಂಗಳಿನಿಂದ ದೊರೆತ ಬೆಂಬಲವೂ ಇದಕ್ಕೆ ಕಾರಣ. ಈ ಕ್ಷಣಕ್ಕಾಗಿ ಕಳೆದ 45 ದಿನಗಳಿಂದ ನಿದ್ರೆಯಿಲ್ಲದ ರಾತ್ರಿಗಳನ್ನ ಕಳೆದಿದ್ದೇನೆ ಎಂದು ತಿಳಿಸಿದ್ರು.
ಟೂರ್ನಿಯುದ್ಧಕ್ಕೂ ನಾವು ಒಗ್ಗಟ್ಟಾಗಿದ್ದೆವು. ಒಳ್ಳೆಯದು, ಕೆಟ್ಟದ್ದರ ನಡುವೆಯೂ ಪರಸ್ಪರ ಬೆಂಬಲ ವ್ಯಕ್ಯಪಡಿಸುತ್ತಿದ್ದೆವು, ಈ ಸಕಾರಾತ್ಮಕತೆಯೇ ನಮ್ಮನ್ನ ಟ್ರೋಫಿಯತ್ತ ಕೊಂಡೊಯ್ದಿದೆ ಅಂತ ಭಾವಿಸುತ್ತೇನೆ ಎಂದು ಮಂಧಾನ ಹರ್ಷಿಸಿದರು.

