ತನಿಖೆ ನಿಲ್ಲಲ್ಲ, ಶಿಕ್ಷೆ ಪ್ರಮಾಣ ಕಡಿಮೆ ಆಗಬಹುದು; ಭಾವನಾತ್ಮಕ ಪತ್ರ ಕೊನೆಯ ಅಸ್ತ್ರ ಅಷ್ಟೆ – ಸ್ನೇಹಮಯಿ ಕೃಷ್ಣ

Public TV
1 Min Read
mysuru Snehamayi Krishna

ಮೈಸೂರು: ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಮುಡಾದಿಂದ ಪಡೆದಿದ್ದ 14 ಸೈಟ್ ವಾಪಾಸ್ ಕೊಟ್ಟಿದ್ದಾರೆ. ಈ ಬಗ್ಗೆ ದೂರದಾರ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಕೃಷ್ಣ ಅವರು, ಸಿಎಂ ಪತ್ನಿ ತಮಗೆ ಬಂದ ಸೈಟ್ ವಾಪಾಸ್ ಕೊಟ್ಟಿದ್ದರು ತನಿಖೆ ನಡೆಯುತ್ತೆ. ಅವರಿಗೆ ಶಿಕ್ಷೆ ಪ್ರಮಾಣ ಕಡಿಮೆ ಆಗಬಹುದು ಅಷ್ಟೆ. ಸಿಎಂ ಪತ್ನಿ ಪತ್ರ ಬರೆಯುವ ಮೂಲಕ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಹೇಳಿದ್ದಾರೆ.

parvathi siddaramaiah siddaramaiah

ಇದು ನನ್ನ ಹೋರಾಟಕ್ಕೆ ದೊಡ್ಡ ಜಯ. ನನ್ನ ಉದ್ದೇಶಕ್ಕೆ ಮುನ್ನುಡಿಯಾಗಿ 14 ನಿವೇಶನಗಳನ್ನು ವಾಪಸ್‌ ಕೊಡಲು ಮುಂದಾಗಿದ್ದಾರೆ. ಇದೇ ರೀತಿ ಸಾವಿರಾರು ನಿವೇಶನಗಳು ಮುಡಾದಿಂದ ಅಕ್ರಮವಾಗಿ ಅನೇಕರಿಗೆ ಹೋಗಿದೆ. ಅವು ಮುಡಾಗೆ ವಾಪಸ್‌ ಬರುವವರೆಗೂ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.

ಸ್ನೇಹಮಯಿ ಕೃಷ್ಣ ಎಂಬ ಸಾಮಾನ್ಯ ವ್ಯಕ್ತಿ ನಮ್ಮ ವಿರುದ್ಧ ಏನು ಮಾಡಲು ಸಾಧ್ಯ ಎಂಬ ಅಹಂಕಾರ ಇತ್ತು. ಅವರ ಪ್ರಯತ್ನಗಳು ವಿಫಲವಾಗಿ ಸತ್ಯ ಅರಿವಾಗಿದೆ. ನಾವು ಏನೇ ಹೋರಾಟ ಮಾಡಿದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಬದಲು ಶಿಕ್ಷೆಯನ್ನು ಕಡಿಮೆ ಮಾಡಿಕೊಳ್ಳೋಣ ಎಂದು ಈ ಪ್ರಯತ್ನ ಮಾಡಿರುವಂತಿದೆ ಎಂದು ಸಿಎಂ ಪತ್ನಿ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ತಪ್ಪು ಮಾಡದೇ ಇದ್ದಿದ್ದರೆ ಸೈಟ್‌ ವಾಪಸ್‌ ಕೊಡುವ ನಿರ್ಧಾರ ಮಾಡುತ್ತಿರಲಿಲ್ಲ. ಲೋಕಾಯುಕ್ತ, ಇ.ಡಿ ಕೇಸ್‌ ಹಾಕಿದ ಮೇಲೆ ನಿರ್ಧಾರ ಏಕೆ ಕೈಗೊಂಡರು? ಅದಕ್ಕೂ ಮುಂಚೆ ನಿರ್ಧರಿಸಬಹುದಿತ್ತಲ್ಲ ಎಂದು ಪ್ರಶ್ನಿಸಿದರು.

Share This Article