ಉಡುಪಿ: ಮನೆಯ ಸಮೀಪ ಇಟ್ಟಿದ್ದ ಮೀನಿನ ಬಲೆಯಲ್ಲಿ ಆಕಸ್ಮಿಕವಾಗಿ ಸಿಲುಕಿ ಒದ್ದಾಡುತ್ತಿದ್ದ ಕೇರೆ ಹಾವನ್ನು ರಕ್ಷಿಸಲಾಗಿದೆ.
ಜಿಲ್ಲೆಯ ಕಾಪು ನಿವಾಸಿ ಹಾಜಬ್ಬ ಎಂಬವರ ಮನೆಯ ಕಂಪೌಂಡ್ ಒಳಗೆ ಬಂದಿದ್ದ ಕೇರೆ ಹಾವು, ಬಿಲದೊಳಗೆ ಅವಿತಿದ್ದ ಇಲಿಯ ಬೇಟೆಗೆ ಇಳಿದಿತ್ತು. ಇಲಿ ಹಿಡಿಯುವ ರಭಸದಲ್ಲಿ ಹಾವು ಕಂಪೌಂಡಿನ ಮೂಲೆಯಲ್ಲಿದ್ದ ಬಲೆಗೆ ಸಿಲುಕಿಕೊಂಡಿತ್ತು.
Advertisement
Advertisement
ಭಯಗೊಂಡ ಹಾವು ಬಲೆಯಿಂದ ಹೊರಗೆ ಬರಲು ಪ್ರಯತ್ನಿಸಿದರೂ ಆಗದೆ ಇನ್ನಷ್ಟು ಬಲೆಯ ಒಳಗೆ ಸಿಲುಕಿಕೊಂಡಿತ್ತು. ಒದ್ದಾಡುತ್ತಾ ಹಾವಿನ ಅರ್ಧ ಭಾಗ ಬಲೆಯಲ್ಲಿ ಬಿಗಿದು ಗಾಯಗೊಂಡಿತ್ತು. ಗಾಯದಿಂದ ಇರುವೆಗಳು ಕೂಡ ಹಾವಿನ ಮೇಲೆ ಹರಿದಾಡಿದ್ದವು. ಬಲೆಯಿಂದ ಹೊರಗೆ ಬರಲು ಪ್ರಯತ್ನಿಸಿ ಸುಸ್ತಾದ ಹಾವು ಅಲ್ಲೇ ಬಿದ್ದುಕೊಂಡಿತ್ತು.
Advertisement
Advertisement
ಮಧ್ಯಾಹ್ನದ ವೇಳೆ ಮನೆಯವರು ಬಲೆಯಲ್ಲಿ ಸಿಲುಕಿದ ಹಾವನ್ನು ನೋಡಿ ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ದೂರವಾಣಿ ಕರೆ ಮಾಡಿ ಹಾವನ್ನು ರಕ್ಷಿಸುವ ಕಾರ್ಯಕ್ಕೆ ಮಾರ್ಗದರ್ಶನ ಪಡೆದರು. ಕೇರೆ ಹಾವನ್ನು ಕೈಯಲ್ಲಿ ಹಿಡಿದು ಬಲೆಯನ್ನು ಕತ್ತರಿಸಿದರು. ಇತರರ ಸಹಾಯದೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ನಡೆಸಿದ ಅವಿರತ ಪ್ರಯತ್ನದಿಂದ ಹಾವನ್ನು ಬಲೆಯಿಂದ ಸಂಪೂರ್ಣವಾಗಿ ಹೊರತೆಗೆದು ರಕ್ಷಿಸಲಾಯಿತು.
ಹಾವಿನ ಗಾಯಗೊಂಡ ಭಾಗಕ್ಕೆ ಅರಶಿನವನ್ನು ಹಚ್ಚಿ ಆರೈಕೆ ಮಾಡಲಾಯಿತು. ಬಳಿಕ ಗೋಣಿಯಲ್ಲಿ ಹಾಕಿ ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.