ಚಿಕ್ಕಬಳ್ಳಾಪುರ: ಸಿಎಂ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಕೊಟ್ಟ ಮಾತು ತಪ್ಪುತ್ತಿದ್ದಾರೆ ಎಂದು ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.
ಬಾಗೇಪಲ್ಲಿ ಪಟ್ಟಣದಲ್ಲಿ ಮಾತನಾಡಿದ ಶಾಸಕರು, ತಮ್ಮ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ 64 ಕೋಟಿ ರೂ. ಅನುದಾನವನ್ನು ತಡೆ ಹಿಡಿಯಲಾಗಿದೆ. ಅನುದಾನ ತಡೆ ಹಿಡಿದ ಕಾರಣ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಬಹಳ ಕಷ್ಟ ಆಗುತ್ತಿದೆ. ಹೀಗಾಗಿ ನಾನು ಇತ್ತೀಚೆಗೆ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ, ತಡೆ ಹಿಡಿದ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದೆ ಎಂದು ತಿಳಿಸಿದರು.
ತಮ್ಮ ಭೇಟಿಯ ಸಂದರ್ಭದಲ್ಲಿ ತಡೆ ಹಿಡಿತ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದ ಮುಖ್ಯಮಂತ್ರಿಗಳು ಇಂದಿಗೂ ಅನುದಾನ ಕೊಟ್ಟಿಲ್ಲ. ಬಿಎಸ್‍ವೈ ಕೊಟ್ಟ ಮಾತು ತಪ್ಪಿದ್ದಾರೆ. ಅಧಿವೇಶನ ಮುಗಿಯುವ ವೇಳೆಗೆ ಅನುದಾನ ಕೊಟ್ಟರೆ ಕೊಡಲಿ, ಇಲ್ಲವಾದರೆ ಅಧಿವೇಶನದಲ್ಲಿ ಇದಕ್ಕೆ ಉತ್ತರ ನೀಡುತ್ತೇನೆ. ಅನುದಾನ ಯಾವ ರೀತಿ ತೆಗೆದುಕೊಳ್ಳಬೇಕು ಎಂಬುವುದು ನನಗೆ ಗೊತ್ತಿದೆ. ಸಿದ್ದರಾಮಯ್ಯರೊಂದಿಗೆ ಮಾತನಾಡಿ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.