ಡಂಬುಲ್ಲಾ: ಮಹಿಳಾ ಏಷ್ಯಾಕಪ್ (Women’s Asia Cup) ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡ (India Womens Team) ಸತತ 5ನೇ ಬಾರಿಗೆ ಫೈನಲ್ ತಲುಪಿತು.
2012, 2016, 2018, 2022ರಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ 2018 ಹೊರತುಪಡಿಸಿ ಮೂರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2018ರಲ್ಲಿ ಬಾಂಗ್ಲಾ (Bangladesh Womens) ವಿರುದ್ಧವೇ ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಸತತ 5ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಭಾರತ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮುವ ಭರವಸೆ ಮೂಡಿಸಿದೆ.
ಶುಕ್ರವಾರ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ಗೆ 80 ರನ್ ಬಾರಿಸಿತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಭಾರತ 11 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 83 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಚೇಸಿಂಗ್ ಆರಂಭಿಸಿದ ಭಾರತದ ಪರ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ (Shafali Verma) 26 ರನ್ (28 ಎಸೆತ, 2 ಬೌಂಡರಿ), ಸ್ಮೃತಿ ಮಂಧಾನ (Smriti Mandhana) 55 ರನ್ (39 ಎಸೆತ, 9 ಬೌಂಡರಿ, 1 ಸಿಕ್ಸರ್) ಬಾರಿಸಿ ಅಜೇಯರಾಗುಳಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಬಾಂಗ್ಲಾ ದೇಶದ ವಿರುದ್ಧ ಭಾರತದ ಬೌಲರ್‌ಗಳು ಘಾತುಕ ದಾಳಿ ನಡೆಸಿದರು. ಮಧ್ಯಮವೇಗಿ ರೇಣುಕಾ ಸಿಂಗ್ 4 ಓವರ್‌ಗಳಲ್ಲಿ 1 ಮೇಡಿನ್ ಸಹಿತ ಕೇವಲ 10 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತರು. ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 50 ವಿಕೆಟ್‌ಗಳ ಮೈಲುಗಲ್ಲು ತಲುಪಿದರು. ಇದರೊಂದಿಗೆ ರಾಧಾ ಯಾದವ್ 4 ಓವರ್‌ಗಳಲ್ಲಿ 3 ವಿಕೆಟ್ ಕಿತ್ತರೆ, ಪೂಜಾ ವಸ್ತ್ರಕಾರ್ ಹಾಗೂ ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಕಿತ್ತರು.
ಬಾಂಗ್ಲಾ ಪರ ನಾಯಕಿ ನಿಗರ್ ಸುಲ್ತಾನಾ 51 ಎಸೆತ ಎದುರಿಸಿ 32 ರನ್, ಶೋರ್ನಾ ಅಖ್ತರ್ 19 ರನ್ ಗಳಿಸಿದ್ರೆ, ಉಳಿದ ಆಟಗಾರರು ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದರು.
ಶುಕ್ರವಾರ (ಇಂದು) ರಾತ್ರಿ ನಡೆಯುವ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಆತಿಥೇಯ ಶ್ರೀಲಂಕಾ ಮುಖಾಮುಖಿಯಾಗಲಿವೆ. ಗೆದ್ದ ತಂಡ ಫೈನಲ್‌ನಲ್ಲಿ ಭಾರತ ತಂಡದೊಂದಿಗೆ ಫೈನಲ್‌ನಲ್ಲಿ ಸೆಣಸಲಿದೆ.