ಆ್ಯಂಟಿಗುವಾ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ಸ್ಮೃತಿ ಮಂಧಾನ ಅವರು ಏಕದಿನ ಕ್ರಿಕೆಟಿನಲ್ಲಿ 2 ಸಾವಿರ ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿಯವರ ದಾಖಲೆಯನ್ನು ಮುರಿದಿದ್ದಾರೆ.
ಪ್ರಸ್ತುತ ಭಾರತದ ಮಹಿಳಾ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, 2-1 ಅಂತರದಲ್ಲಿ ಏಕದಿನ ಸರಣಿಯನ್ನು ಗೆದ್ದುಗೊಂಡಿದೆ. ಕಾಲಿನ ಗಾಯದ ಸಮಸ್ಯೆಯಿಂದ ಮೊದಲ ಪಂದ್ಯದಿಂದ ಹೊರಗೆ ಉಳಿದಿದ್ದ ಮಂಧಾನ ಎರಡನೇ ಪಂದ್ಯದಲ್ಲಿ ಕಮ್‍ಬ್ಯಾಕ್ ಮಾಡಿದ್ದರು.
Advertisement
Advertisement
ಬುಧವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಮಂಧಾನ, 63 ಎಸೆತದಲ್ಲಿ 74 ರನ್ (9 ಬೌಂಡರಿ, 3 ಸಿಕ್ಸ್) ಸಿಡಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ನೀಡಿದ 194 ರನ್‍ಗಳ ಗುರಿಯನ್ನು ಭಾರತ ಸುಲಭವಾಗಿ ಬೆನ್ನಟ್ಟಿ ಗೆಲವು ಸಾಧಿಸಿತು. ಈ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಮಂಧಾನ ಕೊಹ್ಲಿ ಮಾಡಿದ ವೇಗದ 2000 ರನ್ ದಾಖಲೆಯನ್ನು ಮುರಿದು ಹಾಕಿದ್ದಾರೆ.
Advertisement
ಕೊಹ್ಲಿ ತಾನು ಆಡಿದ 53 ಇನ್ನಿಂಗ್ಸ್ ನಲ್ಲಿ 2 ಸಾವಿರ ರನ್‍ಗಳ ಗಡಿ ದಾಟಿದ್ದರೆ ಮಂಧಾನ ಅವರು ಕೇವಲ 51 ಇನ್ನಿಂಗ್ಸ್ 43.08 ರ ಸರಾಸರಿಯಲ್ಲಿ 2025 ರನ್ ಹೊಡೆದು ಕೊಹ್ಲಿ ಅವರ ಈ ದಾಖಲೆಯನ್ನು ಮುರಿದು ಹಾಕಿದ್ದಾರೆ. ಭಾರತದ ಪರ ಪುರುಷರ ಪೈಕಿ 48 ಇನ್ನಿಂಗ್ಸ್ ನಲ್ಲಿ 2 ಸಾವಿರ ರನ್ ಗಡಿ ದಾಟುವ ಮೂಲಕ ಶಿಖರ್ ಧವನ್ ಮೊದಲ ಸ್ಥಾನದಲ್ಲಿದ್ದಾರೆ. ಸೌರವ್ ಗಂಗೂಲಿ 52 ಇನ್ನಿಂಗ್ಸ್ ನಲ್ಲಿ 2000 ರನ್ ಹೊಡೆದಿದ್ದರು.
Advertisement
ಮಂಧಾನ ಈವರೆಗೆ 51 ಏಕದಿನ ಪಂದ್ಯಗಳಲ್ಲಿ 43.08 ಸರಾಸರಿಯಲ್ಲಿ 2,025 ರನ್ ಗಳಿಸಿದ್ದಾರೆ. ತನ್ನ ಏಕದಿನ ವೃತ್ತಿಜೀವನದಲ್ಲಿ ಇಲ್ಲಿವರೆಗೆ ನಾಲ್ಕು ಶತಕಗಳು ಮತ್ತು 17 ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ ಮತ್ತು ಮೆಗ್ ಲ್ಯಾನಿಂಗ್ ನಂತರ ವೇಗವಾಗಿ 2000 ಏಕದಿನ ರನ್ ಗಳಿಸಿದ ಮೂರನೇ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದರ ಜೊತೆಗೆ ಇನ್ನೊಂದು ದಾಖಲೆ ಮಾಡಿರುವ ಸ್ಮೃತಿ ಮಂಧಾನ, ಚೇಸಿಂಗ್ ವೇಳೆ ಏಕದಿನ ಪಂದ್ಯದಲ್ಲಿ 9 ಅರ್ಧ ಶತಕ ಸಿಡಿಸಿದ್ದ ನ್ಯೂಜಿಲೆಂಡ್ ಆಟಗಾರ್ತಿ ಸುಜಿ ಬೇಟ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಕಳೆದ 9 ಇನ್ನಿಂಗ್ಸ್ ನಲ್ಲಿ ಮಂಧಾನ 663 ರನ್ ಸಿಡಿಸಿದ್ದಾರೆ.