ನವದೆಹಲಿ: 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಇದರಲ್ಲಿ ಬಿಜೆಪಿಯ ಪ್ರಮುಖರಾದ ಸ್ಮೃತಿ ಇರಾನಿ, ಅರ್ಜುನ್ ಮುಂಡಾ, ಅಜಯ್ ಮಿಶ್ರಾ ಟೆನಿ, ಕೈಲಾಶ್ ಚೌಧರಿ ಹಾಗೂ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ಮಂದಿ ಸೋಲನುಭವಿಸಿದ್ದಾರೆ.
ಈ ಪ್ರಮುಖರ ಭಾರೀ ಸೋಲಿನಿಂದಾಗಿ ಅದರಲ್ಲೂ ವಿಶೇಷವಾಗಿ ಹಿಂದಿ ಹೃದಯಭಾಗದಲ್ಲಿ ಬಿಜೆಪಿಯು ತನ್ನ ಎನ್‌ಡಿಎ ಮೈತ್ರಿ ಒಕ್ಕೂಟದ ಮೇಲೆ ಸರ್ಕಾರ ರಚನೆಗೆ ಒಲವು ತೋರುವಂತೆ ಮಾಡಿದೆ. 2014 ಮತ್ತು 2019 ರಲ್ಲಿ ಬಿಜೆಪಿಯು ಕ್ರಮವಾಗಿ 282 ಮತ್ತು 303 ಸ್ಥಾನಗಳನ್ನು ಗಳಿಸಿ ತನ್ನದೇ ಆದ ಸ್ಪಷ್ಟ ಬಹುಮತವನ್ನು ಸಾಧಿಸಿತು. ಆದರೆ ಈ ಬಾರಿ ಈ ಬಾರಿ ಎನ್‌ಡಿಎ ಮೈತ್ರಿಕೂಟ 293 ಸ್ಥಾನಗಳನ್ನು ಗೆದ್ದರೆ ಇಂಡಿಯಾ (INDIA) ಮೈತ್ರಿಕೂಟ 234 ಸ್ಥಾನಗಳನ್ನು ಗೆದ್ದುಕೊಂಡಿದೆ. ಸರ್ಕಾರ ರಚನೆಗೆ 272 ಸ್ಥಾನಗಳ ಅಗತ್ಯವಿದೆ.
Advertisement
Advertisement
ಸೋತ ಪ್ರಮುಖರು:
* ಸ್ಮೃತಿ ಇರಾನಿ: ಬಿಜೆಪಿ ಭದ್ರಕೋಟೆಯಾಗಿದ್ದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸ್ಮೃತಿ ಇರಾನಿಯವರ (Smriti Irani) ಸೋಲನ್ನು ಯಾರೂ ನಿರೀಕ್ಷಿಸಿರಲಿಲ್ಲ. 2019 ರಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸಿದ್ದ ಸ್ಮೃತಿ ಇರಾನಿ ಅವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ವಿರುದ್ಧ 1,67,196 ಮತಗಳ ಅಂತರದಿಂದ ಸೋತಿದ್ದಾರೆ. ಈ ಸೋಲು ಅಮೇಥಿಯಲ್ಲಿ ಒಂದು ಯುಗವನ್ನೇ ಅಂತ್ಯಗೊಳಿಸಿದೆ.
Advertisement
* ಅಜಯ್ ಮಿಶ್ರಾ ಟೆನಿ: ವಿವಾದಾತ್ಮಕ ಲಖಿಂಪುರ ಖೇರಿ ಘಟನೆಯಲ್ಲಿ ಸಿಲುಕಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿಯವರನ್ನು (Ajay Mishra Teni) ಸಮಾಜವಾದಿ ಪಕ್ಷದ ಉತ್ಕರ್ಷ್ ವರ್ಮಾ ಅವರು 34,329 ಮತಗಳಿಂದ ಸೋಲಿಸಿದ್ದಾರೆ.
Advertisement
* ಅರ್ಜುನ್ ಮುಂಡಾ: ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ (Arjun Munda) ಅವರು ಜಾರ್ಖಂಡ್‌ನ ಖುಂಟಿ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಇವರು ಕಾಂಗ್ರೆಸ್ ಅಭ್ಯರ್ಥಿ ಕಾಳಿಚರಣ್ ಮುಂಡಾ ವಿರುದ್ಧ 1,49,675 ಮತಗಳ ಅಂತರದಿಂದ ಸೋತಿದ್ದಾರೆ.
* ಕೈಲಾಶ್ ಚೌಧರಿ: ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ (Kailash Choudhary) ಅವರು ರಾಜಸ್ಥಾನದ ಬಾರ್ಮರ್‌ನಲ್ಲಿ ಕಾಂಗ್ರೆಸ್‌ನ ಉಮ್ಮೇದ ರಾಮ್ ಬೇನಿವಾಲ್ ಅವರಿಗಿಂತ 4.48 ಲಕ್ಷ ಮತಗಳಿಂದ ಹಿನ್ನಡೆ ಸಾಧಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಕೈಲಾಶ್ ಅವರಿಗೆ 2,86,733 ಮತಗಳು ಬಿದ್ದಿವೆ.
* ರಾಜೀವ್ ಚಂದ್ರಶೇಖರ್: ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರು ಕೇರಳದ ತಿರುವನಂತಪುರದಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿರುದ್ಧ 16,077 ಮತಗಳ ಅಂತರದಿಂದ ಸೋತಿದ್ದಾರೆ. ರಾಜೀವ್ ಅವರಿಗೆ 3,42,078 ಮತಗಳು ಬಿದ್ದಿವೆ. ಇದನ್ನೂ ಓದಿ: ಲೋಕಸಭೆ ಪ್ರವೇಶಿಸುವ ಅತ್ಯಂತ ಕಿರಿಯ ಸಂಸದರಿವರು!
ಬಿಜೆಪಿಯ ಹಿನ್ನಡೆಗಳು ಈ ಪ್ರಮುಖ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಇವರ ಜೊತೆಗೆ ಸಚಿವರಾದ ಮಹೇಂದ್ರ ನಾಥ್ ಪಾಂಡೆ (Mahendra Nath Pandey), ಕೌಶಲ್ ಕಿಶೋರ್, ಸಾಧ್ವಿ ನಿರಂಜನ್ ಜ್ಯೋತಿ, ಸಂಜೀವ್ ಬಲ್ಯಾನ್, ರಾವ್ ಸಾಹೇಬ್ ದಾನ್ವೆ, ಆರ್ ಕೆ ಸಿಂಗ್, ವಿ ಮುರಳೀಧರನ್, ಎಲ್ ಮುರುಗನ್, ಸುಭಾಸ್ ಸರ್ಕಾರ್ ಮತ್ತು ನಿಶಿತ್ ಪ್ರಮಾಣಿಕ್ ಅವರೂ ಸೋಲಿನ ರುಚಿ ಕಂಡಿದ್ದಾರೆ.
ಉತ್ತರ ಪ್ರದೇಶದ ಚಂದೌಲಿ ಕ್ಷೇತ್ರದಲ್ಲಿ ಕೇಂದ್ರ ಭಾರೀ ಕೈಗಾರಿಕೆ ಸಚಿವ ಮಹೇಂದ್ರ ನಾಥ್ ಪಾಂಡೆ ಸೋತಿದ್ದಾರೆ. ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರು ಮೋಹನ್‌ಲಾಲ್‌ಗಂಜ್‌ನಲ್ಲಿ ಸಮಾಜವಾದಿ ಪಕ್ಷದ ಆರ್‌ಕೆ ಚೌಧರಿ ವಿರುದ್ಧ 70,292 ಮತಗಳಿಂದ ಸೋಲು ಕಂಡಿದ್ದಾರೆ.
ಕೇಂದ್ರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆಯ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ (Sadhvi Niranjan Jyoti) ಅವರು ಯುಪಿಯ ಫತೇಪುರ್‌ನಲ್ಲಿ ಸೋತಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಅವರು ಮಹಾರಾಷ್ಟ್ರದ ಜಲ್ನಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಲ್ಯಾಣ ವೈಜನಾಥ್ ರಾವ್ ಕಾಳೆ ವಿರುದ್ಧ ಸೋತಿದ್ದಾರೆ. ಸಂಪುಟ ಸಚಿವ ಆರ್‌ಕೆ ಸಿಂಗ್ ಅವರು ಬಿಹಾರದ ಅರ್ರಾದಿಂದ ಸಿಪಿಐ(ಎಂಎಲ್)ನ ಸುದಾಮ ಪ್ರಸಾದ್ ವಿರುದ್ಧ ಸೋತಿದ್ದಾರೆ.
ಕೇಂದ್ರ ಸಚಿವ ಸಂಜೀವ್ ಬಲ್ಯಾನ್ (Sanjeev Balyan) ಅವರು ಮುಜಾಫರ್‌ನಗರ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಹರೇಂದ್ರ ಸಿಂಗ್ ಮಲಿಕ್ ವಿರುದ್ಧ 24,000 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಕೇರಳದ ತಿರುವನಂತಪುರಂನಲ್ಲಿ ಕೇಂದ್ರ ವಿದೇಶಾಂಗ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ (V Muraleedharan) ಸೋಲು ಕಂಡಿದ್ದಾರೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಎಲ್ ಮುರುಗನ್ ಅವರು ತಮಿಳುನಾಡಿನ ನೀಲಗಿರಿಯಲ್ಲಿ ಡಿಎಂಕೆಯ ಎ ರಾಜಾ ವಿರುದ್ಧ 2,40,585 ಮತಗಳ ಗಣನೀಯ ಅಂತರದಿಂದ ಸೋತಿದ್ದಾರೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್ (Nishith Pramanik) ಅವರು ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಕ್ಷೇತ್ರದಲ್ಲಿ ಟಿಎಂಸಿಯ ಜಗದೀಶ್ ಚಂದ್ರ ಬಸುನಿಯಾ ವಿರುದ್ಧ 39,000 ಮತಗಳ ಅಂತರದಿಂದ ಸೋತಿದ್ದಾರೆ. ಪಶ್ಚಿಮ ಬಂಗಾಳದ ಬಂಕುರಾ ಲೋಕಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಅರೂಪ್ ಚಕ್ರವರ್ತಿ ವಿರುದ್ಧ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಅವರು 32,778 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.