ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅಮೇಥಿ ಕ್ಷೇತ್ರಕ್ಕೆ ರೈಲು ಬಂದಿದ್ದು ಹೇಗೆ ಎನ್ನುವುದನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಬೊಮ್ಮನಹಳ್ಳಿಯಲ್ಲಿ ಆಯೋಜನೆಗೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮೇಥಿಯ ಬಿಜೆಪಿ ಕಚೇರಿಗೆ ಹಿರಿಯ ವ್ಯಕ್ತಿಯೊಬ್ಬರು ಮಗನ ಜೊತೆ ಬಂದಿದ್ದರು. ಈ ವೇಳೆ ಅವರ ಜೊತೆ ಮಾತನಾಡುತ್ತಿದ್ದಾಗ ಅವರು ಅಮೇಥಿ ಕ್ಷೇತ್ರಕ್ಕೆ ಬಂದ ರೈಲಿನ ಕಥೆಯನ್ನು ತಿಳಿಸಿದರು ಎಂದರು.
Advertisement
“ನಾನು ನನ್ನ ತಂದೆ ಜೊತೆ ನೆಹರು ಭಾಷಣ ಕೇಳಲು ಹೋಗಿದ್ದೆ. ಭಾಷಣದಲ್ಲಿ ಮಾತನಾಡಿದ ನೆಹರು, ಅಮೇಥಿಗೆ ರೈಲು ಸಂಪರ್ಕ ಕೊಡಿಸುತ್ತೇನೆ. ನನಗೆ ಮತ ನೀಡಿ ಎಂದು ಜನರಲ್ಲಿ ಕೇಳಿಕೊಂಡರು. ತಂದೆ ಅವರಿಗೆ ಮತ ಹಾಕಿ ಗೆಲ್ಲಿಸಿದರು. ರೈಲು ಮಾತ್ರ ಬರಲಿಲ್ಲ. ನಂತರ ನನಗೆ ಮದುವೆ ಆಯಿತು. ಚುನಾವಣೆ ವೇಳೆ ಇಂದಿರಾ ಗಾಂಧಿ ಕೂಡ ಅದನ್ನೇ ಹೇಳಿ, ಚುನಾವಣೆಯಲ್ಲಿ ಗೆದ್ದರು. ಆದರೆ ರೈಲು ಮಾತ್ರ ಬರಲೇ ಇಲ್ಲ. ರಾಜೀವ್ ಗಾಂಧಿ ಅದೇ ಮಾತನ್ನು ಮುಂದುವರಿಸಿದರು. ಈಗ ರಾಹುಲ್ ಕೂಡ ಅದನ್ನೇ ಹೇಳುತ್ತಿದ್ದಾರೆ” ಎಂದು ಹಿರಿಯ ವ್ಯಕ್ತಿ ನನ್ನಲ್ಲಿ ವಿಚಾರ ಹೇಳಿದರು ಎಂದು ಸ್ಮೃತಿ ಇರಾನಿ ತಿಳಿಸಿದರು.
Advertisement
ಆ ರೈಲು ಯೋಜನೆಯ ಆರಂಭಿಸಲು ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರಬೇಕಾಯಿತು. ಕಾಂಗ್ರೆಸ್ ನಾಯಕರು ರೈಲು ಹೆಸರಿನಲ್ಲಿ ಮತ ಹಾಕಿಸಿಕೊಂಡರೇ ವಿನಃ ಕೆಲಸ ಮಾಡಲಿಲ್ಲ. ಇದು ಕಾಂಗ್ರೆಸ್ ಆಡಳಿತ ವ್ಯವಸ್ಥೆ ಎಂದು ಹೇಳುವ ಮೂಲಕ ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಕಾರ್ಯಕ್ರಮದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್, ಶಾಸಕ ಸತೀಶ್ ರೆಡ್ಡಿ, ಚಿತ್ರ ನಟಿ ತಾರಾ ಭಾಗಿಯಾಗಿದ್ದರು.
Advertisement
2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಸ್ಮೃತಿ ಇರಾನಿ ವಿರುದ್ಧ 1,07,903 ಮತಗಳ ಅಂತರದಿಂದ ಜಯಗಳಿಸಿದ್ದರು. ರಾಹುಲ್ ಗಾಂಧಿ 4,08,651 ಮತಗಳನ್ನು ಪಡೆದಿದ್ದರೆ, ಸ್ಮೃತಿ ಇರಾನಿ 3,00,748 ಮತಗಳನ್ನು ಪಡೆದಿದ್ದರು.