ಹಾವೇರಿ: ಮದ್ಯ ಹಾಗೂ ಮಾದಕ ವಸ್ತುಗಳ ವ್ಯಸನ ನಮ್ಮ ಜೇಬಿನಲ್ಲಿ ಇಟ್ಟುಕೊಂಡ ನಾಗರ ಹಾವಿದ್ದಂತೆ. ಅದು ಯಾವಾಗಲಾದರೂ ನಮಗೆ ಕೆಟ್ಟದನ್ನು ಮಾಡುವ ಸಾಧ್ಯತೆ ಇರುತ್ತದೆ. ಕಾರಣ ಶಾಶ್ವತವಾಗಿ ವ್ಯಸನಗಳಿಂದ ಹೊರ ಬಂದು ಜೀವನ ಪೂರ್ತಿ ಶಾಂತಚಿತ್ತರಾಗಿ ಸಮಾಜಮುಖಿಯಾಗಿ ಬಾಳುವಂತೆ ಕೈದಿಗಳಿಗೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಕರೆ ನೀಡಿದರು.
ಜಿಲ್ಲಾ ಕಾರಾಗೃಹದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಾದಕ ವಸ್ತು ವ್ಯಸನ ವಿರೋಧಿ ದಿನ ಹಾಗೂ ಪೂರ್ಣವಾಗಿ ವ್ಯಸನ ಬಿಡುವ ಕೈದಿಗಳ ಶಪಥಗೈಯುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Advertisement
Advertisement
ಬೆಳೆಯುವ ಪರಿಸರ, ಸಿಗುವ ಮಾರ್ಗದರ್ಶನ ಹಾಗೂ ಉತ್ತಮ ಶಿಕ್ಷಣದಿಂದ ನಮ್ಮ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಆದರೆ ಕೆಲವು ವ್ಯಕ್ತಿಗಳಿಗೆ ಸರಿಯಾದ ಮಾರ್ಗದರ್ಶನ ಇಲ್ಲದೇ ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳ ದಾಸರಾಗಿ ಕೋಪ, ಕ್ರೋಧ, ಸ್ವಾರ್ಥ ಮನೋಭಾವ ಬೆಳೆಸಿಕೊಂಡಿರುತ್ತಾರೆ. ಇವುಗಳ ಪರಿಣಾಮ ಸಾಂದರ್ಭಿಕ ಒತ್ತಡಕ್ಕೆ ಒಳಗಾಗಿ ತಮಗೆ ಅರಿವಿಲ್ಲದೇ ಅಪರಾಧ ಪ್ರಕರಣಗಳಲ್ಲಿ ಭಾಗಿಗಳಾಗಿ ಜೈಲು ವಾಸಿಗಳಾಗಿರುತ್ತಾರೆ. ಇಂತಹ ಸಾಂದರ್ಭಿಕ ಒತ್ತಡಕ್ಕೆ ಸಿಲುಕಿ ಕೈದಿಗಳಾಗಿರುವ ನೀವು ನಿಮ್ಮ ತಪ್ಪನ್ನು ಅರಿತುಕೊಂಡು ಪರಿವರ್ತನೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.
Advertisement
ಹಾವೇರಿ ಕಾರಾಗೃಹ ಪರಿವರ್ತನೆಯ ತಾಣವಾಗಿದೆ. ಆಧ್ಯಾತ್ಮಿಕ ಕೇಂದ್ರವಾಗಿ, ಕಾಯಕವೇ ಕೈಲಾಸ ತತ್ವ ಪರಿಪಾಲನೆಯ ಕೇಂದ್ರವಾಗಿದೆ. ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳ ಸುಧಾರಣೆಯ ಕಾರ್ಯಕ್ಕೆ ಕೈದಿಗಳಾದ ನೀವು ಸ್ಪಂದಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಜೈಲಿನ ಬಂಧಿಗಳಾಗಿರುವ 224 ಕೈದಿಗಳು ಮದ್ಯ, ಮಾದಕ, ತಂಬಾಕು ಸೇರಿದಂತೆ ಎಲ್ಲ ದುಶ್ಚಟಗಳನ್ನು ತ್ಯಜಿಸುವ ಪ್ರತಿಜ್ಞೆ ಕೈಗೊಂಡು ಮಾದರಿ ಜೈಲಾಗಿ ರೂಪಿಸಲು ಕಾರಣರಾಗಿದ್ದೀರಿ. ಹೀಗಾಗಿ ಹಾವೇರಿ ಕಾರಾಗೃಹ ವ್ಯಸನ ಮುಕ್ತ ಕಾರಾಗೃಹ ಎಂದು ಘೋಷಣೆ ಮಾಡಿದ್ದೀರಿ. ಈ ಪರಿವರ್ತನೆ ದೇಶಕ್ಕೆ ಮಾದರಿಯಾಗಿದೆ. ಹಾವೇರಿ ಕಾರಾಗೃಹ ಭಾರತ ದೇಶದಲ್ಲೇ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಹೇಳಿದರು.
Advertisement
ಕಾಯಕವೇ ಕೈಲಾಸ ತತ್ವದಡಿ ರೈತರಿಗಿಂತ ಉತ್ತಮವಾದ ಕೃಷಿ ಬೆಳೆಯನ್ನು ಕಾರಾಗೃಹ ಆವರಣದಲ್ಲಿ ಕೈದಿಗಳು ಬೆಳೆದಿದ್ದಾರೆ. ಅಕ್ಷರ ಕಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಶಿಕ್ಷಣ ಮುಂದುವರಿಸಲು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಸುಸಜ್ಜಿತ ಗ್ರಂಥಾಲಯನ್ನು ಕಾರಾಗೃಹದ ಆವರಣದಲ್ಲಿ ಆರಂಭಿಸಲಾಗಿದೆ. ವೃತ್ತಿ ಕೌಶಲ್ಯ ತರಬೇತಿಯನ್ನು ಸಹ ನೀಡಲಾಗಿದೆ. ಇದರ ಫಲವಾಗಿ ಜೈಲಿನ ಕೈದಿಗಳು ಕರಕುಶಲ ವಸ್ತುಗಳ ತಯಾರಿಕೆ, ಉತ್ತಮ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೈದಿಗಳೇ ಕಾರಾಗೃಹದ ಆವರಣದಲ್ಲಿ ದೇವಾಲಯ ನಿರ್ಮಾಣ ಮಾಡಿದ್ದಾರೆ. ಯೋಗ, ಆಧ್ಯಾತ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾದರಿ ಜೀವನ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಹೊಸಮಠದ ಬಸವಶಾಂತಲಿಂಗ ಮಹಾಸ್ವಾಮೀಜಿ ಮಾತನಾಡಿ, ಮದ್ಯ ಹಾಗೂ ಮಾದಕ ವ್ಯಸನಗಳು ನಮ್ಮ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ನಾಶಮಾಡುತ್ತಿವೆ. ದುಶ್ಚಟದಿಂದ ದೂರ ಉಳಿಯುವುದಾಗಿ ತಾವೆಲ್ಲ ಶಪಥ ಮಾಡಿರುವುದು ಅಭಿನಂದನೀಯ. ಕಾರಾಗೃಹ ಆತ್ಮಾವಲೋಕನದ ತಾಣ. ಪರಿವರ್ತನೆಯ ತಾಣ, ವ್ಯಕ್ತಿತ್ವ ರೂಪಿಸಿಕೊಳ್ಳುವ ತಾಣ. ಭಗತ್‍ಸಿಂಗ್ ಸೇರಿದಂತೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರು, ಚಿಂತಕರು ಜೈಲುವಾಸದ ಸಂದರ್ಭದಲ್ಲಿ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಂಡು ಹಲವಾರು ಅತ್ಯುತ್ತಮ ಕೃತಿಗಳನ್ನು ಜೈಲಿನಲ್ಲಿ ಇದ್ದಾಗಲೇ ರಚಿಸಿರುವ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿವೆ. ಈ ಮಹಾತ್ಮರಂತೆ ತಾವು ಸಹ ನಿಮ್ಮ ವ್ಯಕ್ತಿತ್ವ ಪರಿವರ್ತನೆಯ ತಾಣವಾಗಿ ಈ ಜೈಲುವಾಸದ ಅವಧಿಯನ್ನು ಸಾರ್ಥಕವಾಗಿ ಬಳಸಿಕೊಂಡು ಆಧ್ಯಾತ್ಮಿಕ ಹಸಿವು ಬೆಳೆಸಿಕೊಂಡು ಸ್ವಚ್ಛವಾದ ಬದುಕು ರೂಪಿಸಿಕೊಳ್ಳಲು ಸಂಕಲ್ಪ ಮಾಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಈಶ್ವರಿವಿಶ್ವವಿದ್ಯಾಲಯದ ಲೀಲಾ ಅಕ್ಕನವರ, ಜಿಲ್ಲಾಸ್ಪತ್ರೆಯ ಮನೋ ವೈದ್ಯ ಡಾ. ವಿಜಯಕುಮಾರ ಬಳಿಗಾರ ವಿಶೇಷ ಉಪನ್ಯಾಸ ನೀಡಿದರು. ಕಾರಾಗೃಹದ ಬಂಧಿಗಳಾದ 206 ಪುರುಷರು ಹಾಗೂ 18 ಮಹಿಳಾ ಬಂಧಿಗಳು ಸೇರಿದಂತೆ 224 ಬಂಧಿಗಳು ಸ್ವಯಂ ಪ್ರೇರಿತರಾಗಿ ಮದ್ಯಮಾದಕ ವಸ್ತು ಸೇವನೆ ಒಳಗೊಂಡಂತೆ ಎಲ್ಲ ರೀತಿ ದುಶ್ಚಟಗಳನ್ನು ತ್ಯಜಿಸಿರುವುದಾಗಿ ಪ್ರತಿಜ್ಞೆ ಮಾಡಿದರು.