ಸಂಸತ್‌ನಲ್ಲಿ ಸ್ಮೋಕ್ ಬಾಂಬ್- ಆರೋಪಿಗಳ ಮೇಲೆ ಯುಎಪಿಎ ಅಡಿ ಕೇಸ್ ದಾಖಲು

Public TV
2 Min Read
Security Breach Inside New Parliament Building On Parliament Attack Anniversary

ನವದೆಹಲಿ: ಸಂಸತ್‌ನಲ್ಲಿ (Parliament) ಬುಧವಾರ ನಡೆದ ಭದ್ರತಾ ಉಲ್ಲಂಘನೆಗೆ (Security Breach) ಸಂಬಂಧಿಸಿಂತೆ ಒಟ್ಟು 5 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಆರೋಪಿಗಳನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೋಕಸಭೆಯಲ್ಲಿ (Lok Sabha) ನಡೆದ ಸ್ಮೋಕ್ ಬಾಂಬ್ ಪ್ರಕರಣದಲ್ಲಿ ಒಟ್ಟು 6 ಮಂದಿ ಭಾಗಿಯಾಗಿದ್ದು, ಮೈಸೂರಿನ ನಿವಾಸಿ ಮನೋರಂಜನ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಅವರೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಮೈಸೂರಿನ ವಿಜಯನಗರ ನಿವಾಸಿ ಎಂಜಿನಿಯರಿಂಗ್ ಪದವೀಧರ ಮನೋರಂಜನ್, ಲಕ್ನೋದ ಸಾಗರ್ ಶರ್ಮಾ, ಹರಿಯಾಣದ ಹಿಸಾರ್‌ನ ನೀಲಂ, ಮಹಾರಾಷ್ಟ್ರದ ಲಾತೂರ್‌ನ ಅಮೋಲ್ ಶಿಂಧೆ ಹಾಗೂ ವಿಶಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿಗಾಗಿ ಶೋಧ ಮುಂದುವರೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಆದೇಶಿಸಿದ್ದಾರೆ. ಇದನ್ನೂ ಓದಿ: ಅಲಹಾಬಾದ್ ವಿವಿ ಹಾಸ್ಟೆಲ್ ಕೊಠಡಿಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟಗೊಂಡು ವಿದ್ಯಾರ್ಥಿಗೆ ಗಾಯ

ಘಟನೆಯಲ್ಲಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಸಂಸತ್‌ನ ಒಳಗೆ ಹಳದಿ ಸ್ಮೋಕ್ ಬಾಂಬ್ ಸಿಡಿಸಿದರೆ ಸಂಸತ್ತಿನ ಹೊರಗೆ ನೀಲಂ ಮತ್ತು ಅಮೋಲ್ ಶಿಂಧೆ ಕೆಂಪು ಮತ್ತು ಹಳದಿ ಸ್ಮೋಕ್ ಬಾಂಬ್ ಸಿಡಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ವಿಶಾಲ್ ಮತ್ತು ಲಲಿತ್ ಝಾ ಗುರ್ಗಾಂವ್ ಮೂಲದವರು. ಲಲಿತ್ ಝಾ ತಮ್ಮ ಮೊಬೈಲ್‌ನಲ್ಲಿ ಘಟನೆಯ ದೃಶ್ಯಾವಳಿಗಳನ್ನು ಸೆರೆಹಿಡಿದು ಮೊಬೈಲ್ ಜೊತೆಗೆ ಅಲ್ಲಿಂದ ಪರಾರಿಯಾಗಿದ್ದಾನೆ. ಇನ್ನು ವಿಶಾಲ್ ಇತರೆ ಆರೋಪಿಗಳಿಗೆ ಆಶ್ರಯ ನೀಡಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: 45 ನಿಮಿಷಗಳ ಪಾಸ್‌ ಪಡೆದು 2 ಗಂಟೆ ಗ್ಯಾಲರಿಯಲ್ಲಿ ಕುಳಿತಿದ್ರು!

ದೆಹಲಿ ಪೊಲೀಸರ ಈವರೆಗಿನ ತನಿಖೆಯಲ್ಲಿ ಎಲ್ಲಾ ಆರೋಪಿಗಳು ಭಗತ್ ಸಿಂಗ್ ಫ್ಯಾನ್ಸ್ ಕ್ಲಬ್ ಎಂಬ ಗ್ರೂಪ್‌ನಲ್ಲಿ ಸಂಪರ್ಕ ಹೊಂದಿದ್ದು, ಒಂದೂವರೆ ವರ್ಷಗಳ ಹಿಂದೆಯೇ ಮೈಸೂರಿನಲ್ಲಿ ಭೇಟಿಯಾಗಿ ಯೋಜನೆ ಬಗ್ಗೆ ಚರ್ಚೆ ನಡೆಸಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾ ಖಾತೆ ಇಲ್ಲ – ಮನೋರಂಜನ್ ಬೆಂಗಳೂರು ನೆಟ್‌ವರ್ಕ್ ಯಾವುದು?

ರೈತರ ಪ್ರತಿಭಟನೆ, ಮಣಿಪುರ ಬಿಕ್ಕಟ್ಟು ಮತ್ತು ನಿರುದ್ಯೋಗದಂತಹ ಸಮಸ್ಯೆಯಿಂದ ನಾವು ಬೇಸತ್ತಿದ್ದೇವೆ. ಈ ಕಾರಣಕ್ಕೆ ಕೃತ್ಯವನ್ನು ನಡೆಸಿದ್ದೇವೆ ಎಂದು ಆರೋಪಿ ಅಮೋಲ್ ಶಿಂಧೆ ವಿಚಾರಣಾ ಸಮಯದಲ್ಲಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಇನ್ನೋರ್ವ ಆರೋಪಿ ಮಹಿಳೆ ನೀಲಂ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಭಾರತ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ನಾವು ನಮ್ಮ ಹಕ್ಕುಗಳಿಗೆ ಧ್ವನಿ ಎತ್ತಿದಾಗ ನಮ್ಮನ್ನು ಜೈಲಿಗೆ ಹಾಕುತ್ತಾರೆ. ಹೀಗೆ ನಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಯಾವುದೇ ಸಂಸ್ಥೆಗೆ ಸೇರಿಲ್ಲ. ನಾವು ನಿರುದ್ಯೋಗಿಗಳು ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ಒಂದಲ್ಲ ಮೂರು ಬಾರಿ ಮನೋರಂಜನ್‌ಗೆ ಪ್ರತಾಪ್‌ ಸಿಂಹ ಕಚೇರಿಯಿಂದ ಸಿಕ್ಕಿತ್ತು ಪಾಸ್‌!

Share This Article