ತುಮಕೂರು: ಸಂಸ್ಕಾರವಂತ ಮನುಷ್ಯ ಹೇಗಿರಬೇಕು ಎಂಬುದಕ್ಕೆ ಎಸ್‌ಎಂ ಕೃಷ್ಣ (SM Krishna) ಮಾದರಿಯಾಗಿದ್ದರು. ಅವರ ರಾಜಕೀಯ ಹಾಗೂ ಖಾಸಗಿ ಜೀವನದಲ್ಲಿ ಒರಟಾಗಿ, ಏಕವಚನದಲ್ಲಿ ಮಾತನಾಡಿದ್ದು ನಾವು ನೋಡಿಲ್ಲ ಎಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ (JC Madhuswamy) ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ನಿಧನ ಹಿನ್ನೆಲೆ ತುಮಕೂರು (Tumakuru) ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ (Chikkanayakanahalli) ಸಂತಾಪ ಸೂಚಿಸಿ ಮಾತನಾಡಿದ ಅವರು, ಎಸ್‌ಎಂ ಕೃಷ್ಣ ಅವರು ಕರ್ನಾಟಕ ರಾಜ್ಯದಲ್ಲಿ ಯಾವುದೇ ರಾಜಕಾರಣಿ ಪಡೆಯದಂತಹ ಸ್ಥಾನ, ಗೌರವ ಪಡೆದಿದ್ದಾರೆ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಎಲ್ಲಾ ಆಯಾಮಗಳಲ್ಲೂ ಕೆಲಸ ಮಾಡಿದ್ದಾರೆ. ಎಲ್ಲಾ ಸೇವೆಗೂ ಗೌರವ ತಂದುಕೊಡುವ ವ್ಯಕ್ತಿತ್ವ ಅವರದ್ದು ಎಂದರು. ಇದನ್ನೂ ಓದಿ: ಪತ್ನಿಯ ಮಾರ್ಫ್ ಫೋಟೋ ಬಳಸಿ ಆ್ಯಪ್ ಏಜೆಂಟರ ಕಿರುಕುಳ – 2,000 ರೂ. ಸಾಲ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆ
ನಾವು ರಾಜಕಾರಣಕ್ಕೆ ಬರುವ ಮೊದಲೇ ಅವರು ಹಿರಿಯ ರಾಜಕಾರಣಿಯಾಗಿದ್ದರು. ನಮಗೆಲ್ಲಾ ತುಂಬಾ ಗೌರವ ಕೊಟ್ಟು ಮಾತನಾಡಿಸುತ್ತಿದ್ದರು. 1989-90ರಲ್ಲೇ ವಿಧಾನಸಭೆ ಸ್ಪೀಕರ್ ಆಗಿದ್ದರು. ವಿಧಾನಸಭೆಯಲ್ಲಿ ನಮ್ಮನ್ನು ಗುರುತಿಸಿ ಮಾತನಾಡಲು ಅವಕಾಶ ನೀಡುತ್ತಿದ್ದರು. ಮಾಧುಸ್ವಾಮಿಯವರೇ ಎದ್ದು ಮಾತನಾಡಿ ಎಂದು ಪ್ರೋತ್ಸಾಹ ನೀಡುತ್ತಿದ್ದರು. ಅವರು ತೋರಿಸುತ್ತಿದ್ದ ಸೌಜನ್ಯ, ಹಾಗೂ ರಾಜಕೀಯ ಶಕ್ತಿಯನ್ನು ಎಂದಿಗೂ ಮರೆಯೋದಿಲ್ಲ. ವಿಧಾನಸಭೆಯಲ್ಲಿ ನಮ್ಮನ್ನು ಮೊದಲು ಗುರುತಿಸಿದ್ದು ಕೃಷ್ಣರವರು. ಆರಂಭದ ದಿನಗಳಲ್ಲಿ ಇಂತಹ ವಿಷಯಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡುತ್ತಿದ್ದರು. ವಿಧಾನಸಭೆಯಲ್ಲಿ ಯಾರಿಗೂ ತಾರತಮ್ಯ ಮಾಡದೇ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದರು. ಮಂತ್ರಿಯಾದಮೇಲೆ ನಮಗೆ ಹೆಚ್ಚಿನ ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದರು. ಅವರು ಮುಖ್ಯಮಂತ್ರಿಯಾದಮೇಲೆ ನಾನು ಸೋತಿದ್ದೆ. ಆಗ ವಿಧಾನಸಭೆಯಲ್ಲಿ ಮಾಧುಸ್ವಾಮಿಯಂತವರು ಇರಬೇಕಿತ್ತು ಎಂದು ನೆನೆದಿದ್ದರು. ಅದನ್ನು ಎಂದಿಗೂ ಮರೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ | ಹಣಕ್ಕಾಗಿ ಕೇಸ್ ಮೇಲೆ ಕೇಸ್ – ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್
ಕೃಷ್ಣ ಅವರ ಬಗ್ಗೆ ನನಗೆ ಅಪಾರವಾದ ಗೌರವ ಇತ್ತು. ಅವರು ಅಷ್ಟೇ ಗೌರವ ಇಟ್ಟುಕೊಂಡಿದ್ದರು. ಅವರು ಇಂದು ನಮ್ಮ ಜೊತೆ ಇಲ್ಲ. ಅವರು ತುಂಬು ಜೀವನ ನಡೆಸಿ ಹೋಗಿದ್ದಾರೆ. ಅವರ ಛಾಪು ರಾಜ್ಯದ ಮೇಲಿದೆ. ಯಾವುದೇ ಪಕ್ಷ, ಜಾತಿ, ಧರ್ಮದಿಂದ ಬರಲಿ. ರಾಜ್ಯಕ್ಕೆ ಇಂತಹ ಸೌಮ್ಯ ಸ್ವಭಾವದ ರಾಜಕಾರಣಿ ಬೇಕು. ಅವರ ನಿಧನಕ್ಕೆ ನನ್ನ ಅಂತಿಮ ಅಶ್ರುತರ್ಪಣೆ ಅರ್ಪಿಸುತ್ತೇನೆ ಎಂದರು. ಇದನ್ನೂ ಓದಿ: ಬೈಕ್‌ಗೆ ಲಾರಿ ಡಿಕ್ಕಿ – ಕೂಲಿ ಕೆಲಸಕ್ಕೆ ಹೊರಟಿದ್ದ ದಂಪತಿ ಸಾವು