ನಕ್ಕರೆ ಅದೇ ಸ್ವರ್ಗ.. ಅನ್ನೋದು ಸಹಜ. ಅದೆಷ್ಟೇ ಬೇಜಾರಿದ್ದರೂ ಒಂದು ಸಣ್ಣನೆಯ ನಗು ಎಲ್ಲವನ್ನೂ ದೂರಮಾಡುತ್ತದೆ. ಅದಕ್ಕಾಗಿಯೇ ʻನಗು ನಗುತಾ ನಲಿ ನಲಿ ಏನೇ ಆಗಲಿʼಎಂದು ಹೇಳಿರುವುದು. ನಗುವಿನಲ್ಲಿ ಅಷ್ಟೊಂದು ಶಕ್ತಿಯಿದೆ. ನಗುವುದು ಒಂದು ಕಲೆಯಾದರೆ, ನಗಿಸುವುದು ಇನ್ನೊಂದು ಕಲೆ. ಈ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಂತೂ ತಾಂತ್ರಿಕ ಬದುಕಿಗೆ ಹೊಂದಿಕೊಂಡಿರುವ ಜನ ನಗುವನ್ನೇ ಮರೆತುಬಿಟ್ಟಿದ್ದಾರೆ. ಆ ನಡುವೆಯೂ ಮಾತುಗಾರ ಮಲ್ಲರು ಆಗಾಗ್ಗೆ ಹಾಸ್ಯ ಮಾಡಿ ಎಲ್ಲರನ್ನೂ ನಕ್ಕು ನಲಿಯುವಂತೆ ಮಾಡುತ್ತಾರೆ.
ಈ ನಗುವಿನ ಮಹತ್ವ ಗಮನಿಸಿಯೇ ಕೆಲವರು ನಗುವಿಗಾಗಿಯೇ ಒಂದು ದಿನವನ್ನ ಮೀಸಲಾಗಿಟ್ಟಿದ್ದಾರೆ. ಪ್ರತಿವರ್ಷ ಮೇ ತಿಂಗಳ ಮೊದಲನೇ ಭಾನುವಾರವನ್ನ ʻವಿಶ್ವ ನಗು ದಿನʼವನ್ನಾಗಿ ಆಚರಿಸಿದರೆ, ಮಾರ್ಚ್ 19ರ ದಿನವನ್ನು ರಾಷ್ಟ್ರೀಯ ನಗುವಿನ ದಿನವನ್ನಾಗಿ (National Laughter Day) ಆಚರಿಸಲಾಗುತ್ತದೆ. ಮೊದಲ ಬಾರಿಗೆ ವಿಶ್ವ ನಗು ದಿನವನ್ನು 1998, ಜನವರಿ 10 ರಂದು ಮುಂಬೈಯಲ್ಲಿ ಆಚರಿಸಲಾಯಿತು.
ನಗುವಿನ ದೀರ್ಘಾವಧಿ ಪ್ರಯೋಜನಗಳೇನು?
ಮಾನಸಿಕ ಸಮಸ್ಯೆ ದೂರ:
ಕೆಲವೊಮ್ಮೆ, ದೀರ್ಘಕಾಲದ ಆರೋಗ್ಯ (Health) ಸಮಸ್ಯೆಗಳು ಅಥವಾ ಮಾನಸಿಕ ಒತ್ತಡದಿಂದಾಗಿ ಜನರು ಖಿನ್ನತೆ ಮತ್ತು ಆತಂಕ ಅನುಭವಿಸುತ್ತಾರೆ. ಮುಖದ ಮೇಲಿನ ಸಣ್ಣ ನಗು ಈ ಮಾನಸಿಕ ಸಮಸ್ಯೆಗಳನ್ನ ದೂರ ಮಾಡುತ್ತದೆ. ಇದನ್ನೂ ಓದಿ: ಖಿನ್ನತೆಯಿಂದ ಬಳಲುತ್ತಿದ್ದೀರಾ ಹಾಗಾದ್ರೆ ಈ ಆಹಾರ ಸೇವಿಸಿ
ನೋವು ನಿವಾರಕ ನಗು:
ದೀರ್ಘಾವಧಿಯಲ್ಲಿ, ನೀವು ಅವಕಾಶ ಸಿಕ್ಕ ತಕ್ಷಣ ನಗುವ ವ್ಯಕ್ತಿಯಾಗಿದ್ದರೆ, ನಗುವು ನೋವು ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದರಿಂದ ದೈಹಿಕ ಸಾಮರ್ಥ್ಯ ಕುಗ್ಗುವುದು ಕಡಿಮೆಯಾಗುತ್ತದೆ. ಜೊತೆಗೆ ಅತಿಯಾದ ಆಲೋಚನೆಗಳಿಂದ ತಲೆಕೂದಲು ಉದುರುವಿಕೆಯೂ ಕಡಿಮೆಯಾಗುತ್ತದೆ. ಇದನ್ನೂ ಓದಿ: ಲೈಂಗಿಕ ಆಸಕ್ತಿ ಹೆಚ್ಚಾಗ್ತಿದೆಯೇ? – ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ವಿಷಯಗಳಿವು..
ಸಕಾರಾತ್ಮಕ ಆಲೋಚನೆ:
ನಗುವಿನಿಂದ ದೇಹದಲ್ಲಿ ನ್ಯೂರೋಪೆಪ್ಟೈಡ್ (ರೋಗ ನಿರೋಧಕ ಅಂಶ) ಬಿಡುಗಡೆಯಾಗಿ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೊತೆಗೆ ಸಕಾರಾತ್ಮಕ ಆಲೋಚನೆಗಳನ್ನೂ ಹೆಚ್ಚಿಸಲು ಸಹಾಯ ಮಾಡುತ್ತದೆ.
ತಕ್ಷಣದ ಪ್ರಯೋಜನಗಳು:
ನಗು ನಿಮ್ಮ ದೇಹದಲ್ಲಿನ ಸ್ನಾಯುಗಳನ್ನು ಉಲ್ಲಾಸಗೊಳಿಸಿ, ಉದ್ವೇಗ ಹೆಚ್ಚಾಗುವುದನ್ನು ತಡೆಯುತ್ತದೆ. ದೈಹಿಕ ಒತ್ತಡ ಕಡಿಮೆ ಮಾಡಿ, ರಕ್ತ ಪರಿಚಲನೆ ಉತ್ತೇಜಿಸುತ್ತದೆ. ಜೊತೆಗೆ ಆಮ್ಲಜನಕ ಹೀರಿಕೊಳ್ಳಲು ಸಹಾಯ ಮಾಡುತ್ತದೆ.