Connect with us

Bengaluru City

ನೊರೆ ಆಯ್ತು, ಈಗ ಬೆಂಗಳೂರಲ್ಲಿ ವಾಸನೆ ಸಮಸ್ಯೆ!

Published

on

ಬೆಂಗಳೂರು: ನೊರೆಯಿಂದ ಸುದ್ದಿಯಾಗಿರುವ ಸಿಲಿಕಾನ್ ಸಿಟಿ ಈಗ ವಾಸನೆಯಿಂದಲೂ ಸುದ್ದಿಯಾಗುತ್ತಿದೆ. ಕೆಂಗೇರಿ ನೈಸ್ ರಸ್ತೆ ಬಳಿ ಇರುವ ಚರಂಡಿ ನೀರಿಗೆ ರಾಸಾಯನಿಕವನ್ನು ಮಿಶ್ರಣ ಮಾಡಿದ ಪರಿಣಾಮ 3 ಕಿ.ಮೀ ವ್ಯಾಪ್ತಿ ಜನತೆ ಈಗ ಕೆಟ್ಟ ವಾಸನೆಯಿಂದ ಕಂಗಲಾಗಿದ್ದಾರೆ.

10 ದಿನದ ಹಿಂದೆಯೇ ವಾಸನೆ ಆರಂಭಗೊಂಡಿದ್ದರೂ ಅಷ್ಟೊಂದು ಪರಿಣಾಮ ಬೀರಿರಲಿಲ್ಲ. ಆದರೆ ಕಳೆದ ಎರಡು ದಿನಗಳಿಂದ ವಾಸನೆ ಜಾಸ್ತಿಯಾಗಿದ್ದು, ಸಂಜೆಯಾದರೆ ವಾಸನೆ ಮತ್ತಷ್ಟು ಜಾಸ್ತಿಯಾಗುತ್ತಿದೆ.

ಆರಂಭದಲ್ಲಿ ಈ ವಾಸನೆಗೆ ಮೂಲ ಕಾರಣ ಏನು ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಆದರೆ ವಾಸನೆ ಎಲ್ಲಿಂದ ಆರಂಭವಾಗಿದೆ ಎನ್ನುವುದರ ಮೂಲವನ್ನು ಹಿಡಿಯಲು ಹೋದಾಗ ಚರಂಡಿ ನೀರಿನಲ್ಲಿ ರಾಸಾಯನಿಕವನ್ನು ಮಿಶ್ರಣ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ನೈಸ್ ರಸ್ತೆಯ ಬಳಿ ಇರುವ ವಿಶ್ವೇಶ್ವರಯ್ಯ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ಈಗ ಆತಂಕಕ್ಕೆ ಒಳಗಾಗಿದ್ದಾರೆ. ಈ ವಾಸನೆಯಿಂದ ಬಾಣಂತಿ ಮತ್ತು ಮಕ್ಕಳ ಮೇಲೆ ಪರಿಣಾಮ ಭಾರೀ ಪರಿಣಾಮ ಬಿದ್ದಿದೆ. ಹೀಗಾಗಿ ಕೆಲ ತಾಯಂದಿರು ಈ ವಾಸನೆಯ ಕಾಟವನ್ನು ತಡೆಯಲಾರದೇ ಮಗುವಿನ ಜೊತೆ ತವರು ಮನೆಗೆ ಸೇರಿದ್ದಾರೆ. ಹಿರಿಯ ವ್ಯಕ್ತಿಗಳ ಆರೋಗ್ಯದ ಮೇಲೂ ಪರಿಣಾಮ ಬಿದ್ದಿದೆ.

ನೊರೆ ಸಮಸ್ಯೆ ವಿಚಾರದಲ್ಲಿ ನ್ಯಾಯಾಲಯದಿಂದ ಪದೇ ಪದೇ ಚಾಟಿ ಏಟು ತಿನ್ನುತ್ತಿರುವ ಬಿಬಿಎಂಪಿ ಆರಂಭದಲ್ಲೇ ಈ ಕೆಟ್ಟ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ. ಕಡಿವಾಣ ಹಾಕದೇ ಇದ್ದಲ್ಲಿ ಮತ್ತಷ್ಟು ಕಡೆ ಕಿಡಿಗೇಡಿಗಳು ರಾಸಾಯನಿಕವನ್ನು ಚರಂಡಿ ನೀರಿಗೆ ಮಿಶ್ರಣ ಮಾಡುವ ಸಾಧ್ಯತೆಯಿದೆ.

ಈ ವಿಚಾರದ ಬಗ್ಗೆ ಸ್ಥಳೀಯ ನಿವಾಸಿ ಅರವಿಂದ್ ಪಬ್ಲಿಕ್ ಟಿವಿಯ ಜೊತೆ ಮಾತನಾಡಿ, ಕೆಲ ದಿನಗಳ ಹಿಂದೆ ವಾಸನೆ ಬರಲು ಆರಂಭಗೊಂಡಿದ್ದರೂ ಯಾರು ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ 4-5 ದಿನಗಳಿಂದ ವಾಸನೆ ಜಾಸ್ತಿಯಾಗಿದೆ. ಆದರಲ್ಲೂ ಎರಡು ದಿನಗಳಿಂದ ವಿಪರೀತವಾಗಿದೆ. ರಾತ್ರಿ ವೇಳೆ ಚರಂಡಿ ನೀರಿಗೆ ಯಾರೋ ಯಾವುದೋ ರಾಸಾಯನಿಕವನ್ನು ಚೆಲ್ಲುತ್ತಿದ್ದಾರೆ. ಇದರಿಂದಾಗಿ ಈ ಸಮಸ್ಯೆ ಸೃಷ್ಟಿಯಾಗಿದೆ. ಈ ಸಮಸ್ಯೆಯ ಬಗ್ಗೆ ಯಶವಂತಪುರ ಶಾಸಕ ಸೋಮಶೇಖರ್ ಮತ್ತು ಬಿಬಿಎಂಪಿಯ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *