ತುಮಕೂರು: ಅಪ್ರಾಪ್ತ ಮಕ್ಕಳಿಗೆ ಚಾಕ್ಲೇಟ್ ಆಸೆ ತೋರಿಸಿ ಬಲವಂತವಾಗಿ ಬೀಡಿ ಸೇದಿಸಿ ಅದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಕಿಡಿಗೇಡಿಗಳು ವಿಕೃತಿ ಮರೆದಿದ್ದಾರೆ.
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಕೆ. ಮೇಲನಹಳ್ಳಿ ಈ ಘಟನೆ ನಡೆದಿದೆ. ಗ್ರಾಮದ ಶಿವಣ್ಣ, ಚಿಕ್ಕಣ್ಣ, ಬೀರಲಿಂಗಪ್ಪ, ಚೇತನ್, ಕೀರ್ತನ್, ಕನಕದಾಸ್ ಎಂಬುವರು ಮಕ್ಕಳಿಗೆ ಬಲವಂತವಾಗಿ ಬೀಡಿ ಸೇದಿಸಿದ್ದಾರೆ. ಕಿಡಿಗೇಡಿಗಳ ಗುಂಪು ಗ್ರಾಮದ ಅಂಗನವಾಡಿ ಮಕ್ಕಳಿಗೆ ಚಾಕ್ಲೇಟ್ ಕೊಡಿಸುತ್ತೇವೆಂದು ಆಸೆ ತೋರಿಸಿ, ಅದಕ್ಕೂ ಮೊದಲು ನೀವು ಬೀಡಿ ಸೇದಿ ತೋರಿಸಬೇಕೆಂದು ಕಿರುಕುಳ ನೀಡಿದ್ದಾರೆ.
Advertisement
ಧೂಮಪಾನ ಮಾಡದ ಮಕ್ಕಳು ಬೀಡಿ ಸೇದಲಾಗದೆ ಈ ಕಿಡಿಗೇಡಿಗಳ ಕೈಗೆ ಸಿಲುಕಿ ನರಳಿದ್ದಾರೆ. ಮಕ್ಕಳನ್ನು ಅನೈತಿಕ ಚಟುವಟಿಕೆಗೆ ದೂಡುವ ಗುಂಪಿನ ವಿರುದ್ಧ ಗ್ರಾಮಸ್ಥರು ತುರುವೇಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಆರೋಪಿಗಳನ್ನ ಶಿಕ್ಷೆಗೆ ಗುರಿಪಡಿಸಿಲ್ಲ. ಈ ಬಗ್ಗೆ ಮಕ್ಕಳ ರಕ್ಷಣಾಧಿಕಾರಿಗಳ ಗಮನಕ್ಕೂ ಬಂದರೂ ಕಿಡಿಗೇಡಿಗಳ ಕೃತ್ಯ ನಿಂತಿಲ್ಲ. ದೂರು ನೀಡಿದ ಬಳಿಕವೂ ಮಕ್ಕಳಿಗೆ ಬೀಡಿ ಸೇದಿಸುತ್ತಿದ್ದಾರೆ ಎಂದು ಮತ್ತೆ ದೂರಿದ್ದಾರೆ.