ಇಂದು ಎಸ್‌ಎಂಕೆ ಅಂತ್ಯಕ್ರಿಯೆ – ಭದ್ರತೆಗೆ 1,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

Public TV
2 Min Read
SM Krishna 2 4

ಮಂಡ್ಯ: ಕರುನಾಡು ಕಂಡ ಅದಮ್ಯ ಚೇತನ, ಮಾಜಿ ಸಿಎಂ ಎಸ್‌.ಎಂ ಕೃಷ್ಣ (SM Krishna) ಅವರು ತಮ್ಮ ಬದುಕಿನ ಪಯಣ ಮುಗಿಸಿದ್ದು ಇಂದು ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ಸೋಮನಹಳ್ಳಿಯಲ್ಲಿ (Somanahalli) ನಡೆಯಲಿದೆ. ಈ ಹಿನ್ನೆಲೆ ಅಂತ್ಯಕ್ರಿಯೆ ಸ್ಥಳದಲ್ಲಿ ಸುಮಾರು 1,000ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಸದ್ಯ ಕೃಷ್ಣರ ಪಾರ್ಥಿವ ಶರೀರವನ್ನು ಮದ್ದೂರಿಗೆ ಕೊಂಡೊಯ್ಯಲಾಗುತ್ತಿದೆ. ಮಾರ್ಗಮಧ್ಯೆ ಕೆಂಗೇರಿ, ರಾಮನಗರ, ಚನ್ನಪಟ್ಟಣದಲ್ಲಿ ಕೆಲಹೊತ್ತು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇನ್ನೂ ಅಂತ್ಯಕ್ರಿಯೆ ಸ್ಥಳದಲ್ಲಿ ಡಿಐಜಿ ಬೋರಲಿಂಗಯ್ಯ, ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ನಿಯೋಜಿಸಲಾಗಿದೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 700ಕ್ಕೂ ಹೆಚ್ಚು ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಇದರೊಂದಿಗೆ ಕೆಎಸ್‌ಆರ್‌ಪಿ, ಡಿಎಆರ್‌ ತುಕಡಿ ಸೇರಿ 1,000ಕ್ಕೂ ಹೆಚ್ಚು ಪೊಲೀಸ್‌ ನಿಯೋಜನೆ ಮಾಡಲಾಗಿದೆ. ಅಗತ್ಯ ಸ್ಥಳಗಳಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ.

SM Krishna 12

ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ:
ಸಂಜೆ 3 ಗಂಟೆ ಸುಮಾರಿಗೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದೆ. ಸಿಎಂ ಸಿದ್ದರಾಮಯ್ಯ, ಸಚಿವರು, ಕೇಂದ್ರದ ಪರವಾಗಿ ಪ್ರಹ್ಲಾದ್‌ ಜೋಶಿ (Pralhad Joshi), ಕುಮಾರಸ್ವಾಮಿ ಸೇರಿ ರಾಜಕೀಯ ಗಣ್ಯರು, ಸ್ವಾಮೀಜಿಗಳು, ಅಪಾರ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಇಂದು ಅಗತ್ಯ ತಯಾರಿಗಳು ನಡೆದಿವೆ. ಡಿಸಿಎಂ ಶಿವಕುಮಾರ್‌ ಸೇರಿ ಪ್ರಮುಖರು ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

SM Krishna 02

3 ಗಂಟೆಯವರೆಗೆ ಅಂತಿಮ ದರ್ಶನ:
ಸೋಮನಹಳ್ಳಿಗೆ 10 ಗಂಟೆ ಬರಲಿರುವ ಕೃಷ್ಣರ ಪಾರ್ಥಿವ ಶರೀರವನ್ನು ಕಾಫಿ ಡೇ (Cafe Coffee Day) ಆವರಣದಲ್ಲಿ ಇಡಲಾಗುತ್ತದೆ. ಬೆಳಗ್ಗೆ 10:30 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಒಕ್ಕಲಿಗ ಸಂಪ್ರದಾಯದಂತೆ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ 15 ಕ್ಕೂ ಹೆಚ್ಚು ವೈದಿಕರಿಂದ ವಿಧಿ ವಿಧಾನ ಕಾರ್ಯಗಳು ನಡೆಯಲಿದೆ. ಗಂಧದ ಕಟ್ಟಿಗೆಳಿಂದ ಮೃತ ದೇಹವನ್ನು ಸುಡುವ ಮೂಲಕ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.

ಮೃತದೇಹ ಇಡಲಾಗುವ ಜಾಗದಲ್ಲಿ ಜರ್ಮನ್ ಟೆಂಟ್ ಹಾಕಲಾಗಿದ್ದು ಬ್ಯಾರೀಕೇಡ್ ಅಳವಡಿಕೆ ಮಾಡಲಾಗಿದೆ. ಮೂರು ಸರತಿ ಮೂಲಕ ದರ್ಶನಕ್ಕೆ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ವಿಐಪಿಗಳಿಗೆ ಜಿಲ್ಲಾಡಳಿತ ವಿಶೇಷ ಗ್ಯಾಲರಿ ನಿರ್ಮಾಣ ಮಾಡಿದೆ. ಎಸ್.ಎಂ ಕೃಷ್ಣರ ಕುಟುಂಬಸ್ಥರಿಗೆ ಕಾಫಿ ಡೇ ಕಟ್ಟಡದ ಪಕ್ಕದಲ್ಲೇ ಆಸನದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಯಿಂದ ಅಂತ್ಯಕ್ರಿಯೆ ಪ್ರಕ್ರಿಯೆ ಆರಂಭವಾಗಲಿದ್ದು 5 ಗಂಟೆ ಒಳಗೆ ಮುಕ್ತಾಯವಾಗಲಿದೆ.

Share This Article