ಚಾಮರಾಜನಗರ: ಮೇರುನಟ ಡಾ.ರಾಜ್‌ಕುಮಾರ್ (Rajkumar) ಅವರು ಕಾಡುಗಳ್ಳ ವೀರಪ್ಪನ್‌ನಿಂದ ಅಪಹರಣವಾದಾಗ ಎಸ್‌ಎಂ ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ರಾಜ್‌ಕುಮಾರ್ ಬಿಡುಗಡೆಗೊಳಿಸಲು ಸ್ಯಾಟ್‌ಲೈಟ್ ಫೋನ್ ಮೂಲಕ ವೀರಪ್ಪನ್ ಜೊತೆ ಎಸ್‌ಎಂಕೆ (SM Krishna) ಮಾತನಾಡಿದ್ದರು.
Advertisement
ರಾಜ್‌ಕುಮಾರ್ ಅಪಹರಣ ಪ್ರಕರಣ ಎಸ್‌ಎಂ ಕೃಷ್ಣ ಅವರಿಗೆ ತಮ್ಮ ಅಧಿಕಾರವಧಿಯಲ್ಲಿ 108 ದಿನಗಳ ಕಾಲ ಹೈರಾಣು ಮಾಡಿತ್ತು. ಜೊತೆಗೆ ಇದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಆದರೂ ಎಸ್‌ಎಂ ಕೃಷ್ಣ ಅವರು ಧೃತಿಗೆಡದೆ ಜಾಣ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದರು. ಕಾಡುಗಳ್ಳ ವೀರಪ್ಪನ್ ಜೊತೆ ಸ್ಯಾಟ್‌ಲೈಟ್ ಫೋನ್ ಮೂಲಕ ಮಾತನಾಡಿ ಮನವೊಲಿಸಿ, ಆತನ ಕಪಿಮುಷ್ಟಿಯಿಂದ ರಾಜ್‌ಕುಮಾರ್ ಅವರನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದರು.ಇದನ್ನೂ ಓದಿ: ಎಸ್‌ಎಂ ಕೃಷ್ಣ ವಿಧಿವಶ – ಬುಧವಾರ ರಾಮನಗರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ
Advertisement
Advertisement
ಹೌದು, 2000ರ ಜು.30 ರಂದು ರಾತ್ರಿ ಸುಮಾರು 9 ಗಂಟೆ ವೇಳೆಗೆ ಚಾಮರಾಜನಗರ ಜಿಲ್ಲೆ ಗಡಿಭಾಗದ ತಮಿಳುನಾಡಿನ ದೊಡ್ಡ ಗಾಜನೂರಿನಿಂದ ಮೇರುನಟ ಡಾ.ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದನು. ಈ ವೇಳೆ ಪಾರ್ವತಮ್ಮ ಅವರು ರಾಜ್‌ಕುಮಾರ್ ಜೊತೆಗಿದ್ದರು. ಅಪಹರಣ ಮಾಡುವಾಗ ಆಡಿಯೋ ಕ್ಯಾಸೆಟ್‌ವೊಂದನ್ನು ಕೊಟ್ಟು, ಅದನ್ನು ಎಸ್‌ಎಂ ಕೃಷ್ಣ ಅವರಿಗೆ ತಲುಪಿಸುವಂತೆ ಹೇಳಿದ್ದನು.
Advertisement
ಅಂದು ರಾತ್ರಿಯೇ ಪಾರ್ವತಮ್ಮ ಚಾಮರಾಜನಗರಕ್ಕೆ ಬಂದು ಎಸ್.ಎಂ.ಕೃಷ್ಣ ಅವರಿಗೆ ದೂರವಾಣಿ ಕರೆ ಮಾಡಿ ಅಪಹರಣದ ಸುದ್ದಿ ತಿಳಿಸಿದ್ದರು. ಜೊತೆಗೆ ಆ ದಿನ ಮಧ್ಯರಾತ್ರಿ ಬೆಂಗಳೂರಿಗೆ ತೆರಳಿ ಎಸ್‌ಎಂಕೆಗೆ ಆಡಿಯೋ ಕ್ಯಾಸೆಟ್‌ನ್ನು ಕೂಡ ನೀಡಿದ್ದರು. ಕ್ಯಾಸೆಟ್‌ನಲ್ಲಿ ತಮಿಳುನಾಡಿಗೆ ಇಂತಿಷ್ಟೇ ಕಾವೇರಿ ನೀರು ಬಿಡುಗಡೆ ಮಾಡಬೇಕು ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ವೀರಪ್ಪನ್ ಒತ್ತಾಯಿಸಿದ್ದನು.
ಕಾವೇರಿ ವಿವಾದ, ಭೀಕರ ಬರಗಾಲದಂತಹ ಸಮಸ್ಯೆ ಎದುರಿಸುತ್ತಿದ್ದ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರಕ್ಕೆ ಡಾ.ರಾಜ್‌ಕುಮಾರ್ ಅಪಹರಣ ಪ್ರಕರಣ ಬರಸಿಡಿಲಿನಂತೆ ಎರಗಿತ್ತು. ಒಂದೆಡೆ ಇಡೀ ರಾಜ್ಯ ಹೊತ್ತಿ ಉರಿಯತೊಡಗಿತ್ತು. ಇನ್ನೊಂದೆಡೆ ವೀರಪ್ಪನ್ ಬೇಡಿಕೆಗಳನ್ನು ಈಡೇರಿಸಿ ರಾಜ್‌ಕುಮಾರ್ ಅವರನ್ನು ಜೀವಂತವಾಗಿ ಕರೆತರುವ ಸವಾಲು ಎಸ್‌ಎಂ ಕೃಷ್ಣ ಅವರಿಗೆ ಎದುರಾಗಿತ್ತು.
ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿದ ಎಸ್‌ಎಂ ಕೃಷ್ಣ ರಾಜ್‌ಕುಮಾರ್ ಬಿಡುಗಡೆಗೆ ಹಲವು ರೀತಿಯಲ್ಲಿ ಪ್ರಯತ್ನಿಸಿದರು. ವೀರಪ್ಪನ್ ಬಳಿಗೆ ಸಂಧಾನಕಾರರನ್ನು ಕಳುಹಿಸಿದ ಎಸ್‌ಎಂ ಕೃಷ್ಣ ವೀರಪ್ಪನ್ ಜೊತೆ ಸ್ಯಾಟ್‌ಲೈಟ್ ಫೋನ್‌ನಲ್ಲಿ ಮಾತನಾಡಿ ವೀರಪ್ಪನ್ ಕಪಿಮುಷ್ಟಿಯಿಂದ ಡಾ.ರಾಜ್‌ಕುಮಾರ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಆಗ ಇಡೀ ಕರ್ನಾಟಕ ನಿಟ್ಟುಸಿರು ಬಿಟ್ಟಿತ್ತು.ಇದನ್ನೂ ಓದಿ: ಭಾಗ-1 | ಶಾಸಕನಿಂದ ಮುಖ್ಯಮಂತ್ರಿವರೆಗೆ…. ಎಸ್‌ಎಂಕೆ ರಾಜಕೀಯ ಜೀವನದ ಏಳುಬೀಳು!