ಮಂಡ್ಯ: ಎಸ್.ಎಂ.ಕೃಷ್ಣ (SM Krishna) ಅವರು ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಿಂದ ಆಯ್ಕೆಯಾದ ರಾಜ್ಯದ ಮೊದಲ ಹಾಗೂ ಏಕೈಕ ಮುಖ್ಯಮಂತ್ರಿಯಾದವರು. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ (Maddur) ರಾಜಕೀಯ ಜೀವನ ಆರಂಭ ಮಾಡಿ ರಾಜಕೀಯದ ಉತ್ತುಂಗ ಶಿಖರದವರೆಗೆ ಬೆಳೆದಿದ್ದಾರೆ. ಜೊತೆಗೆ ಮಂಡ್ಯವನ್ನು ಇಂಡಿಯಾದವರೆಗೆ ಕೊಂಡೊಯ್ದು, ಸಕ್ಕರೆ ನಾಡಿನ ಅಚ್ಚುಮೆಚ್ಚಿನ ಕುವರನ ಅಗಲಿಗೆ ರಾಜ್ಯ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಮಂಡ್ಯ ಎಂದರೆ ಇಂಡಿಯಾ ಎನ್ನುವ ಮಾತು ಇದೆ. ಮಂಡ್ಯವನ್ನು ಇಂಡಿಯಾ ಲೆವೆಲ್‌ಗೆ ಕೊಂಡೊಯ್ದ ಮೊದಲ ವ್ಯಕ್ತಿ ಎಂದರೆ ಅದು ಎಸ್.ಎಂ.ಕೃಷ್ಣ ಅವರು. ಕೃಷ್ಣ ತಮ್ಮ ನಡೆ, ನುಡಿ, ವ್ಯಕ್ತಿತ್ವದಿಂದ ಎಲ್ಲರಿಗೂ ಅಚ್ಚುಮೆಚ್ಚಿನ ವ್ಯಕ್ತಿ ಆಗಿದ್ದವರು. 60 ವರ್ಷಗಳ ಸುದೀರ್ಘ ರಾಜಕೀಯ ಮಾಡಿದ ಎಸ್.ಎಂ.ಕೃಷ್ಣ ಅವರು ಸಕ್ಕರೆ ನಾಡು ಮಂಡ್ಯ ಜಿಲ್ಲೆಯಿಂದ ಆಯ್ಕೆಯಾಗಿ ರಾಜ್ಯದ ಮುಖ್ಯಮಂತ್ರಿ ಆದ ಏಕೈಕ ವ್ಯಕ್ತಿ ಆಗಿದ್ದಾರೆ.ಇದನ್ನೂ ಓದಿ: ವಿದ್ಯೆ ಕೊಟ್ಟ ಊರಿನ ಋಣವನ್ನು ಬಡ್ಡಿ ಸಮೇತ ತೀರಿಸಿದ್ರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ!
1999ರಲ್ಲಿ ಕೆಪಿಸಿ ಅಧ್ಯಕ್ಷರಾಗಿದ್ದ ಎಸ್.ಎಂ.ಕೃಷ್ಣ ಅಂದಿನ ಚುನಾವಣೆಯ ಮುಂದಾಳತ್ವವನ್ನು ವಹಿಸಿಕೊಂಡಿದ್ದರು. ಈ ವೇಳೆ 132 ಸೀಟುಗಳನ್ನು ಗೆದ್ದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಸ್ಥಾಪನೆ ಮಾಡಿತು. ಆಗ ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಜಯಗಳಿಸಿದ್ದ ಎಸ್.ಎಂ.ಕೃಷ್ಣ ಅವರನ್ನು ಒಮ್ಮತದಿಂದ ಸಿಎಂ ಆಗಿ ಆಯ್ಕೆ ಮಾಡಲಾಯಿತು. ಆ ಮೂಲಕ ಮಂಡ್ಯ ಜಿಲ್ಲೆಯ ಮೊದಲ ಸಿಎಂ ಹೆಗ್ಗಳಿಗೆ ಪಾತ್ರರಾದರು.
ಇವರು ಸಿಎಂ ಆಗಿದ್ದ ವೇಳೆ ರಾಜ್ಯದಲ್ಲಿ ಎರಡು ಘಟನೆಗಳು ದೊಡ್ಡ ಮಟ್ಟದ ಚರ್ಚೆಗೆ ಆಸ್ಪದ ನೀಡಿದ್ದವು. ಡಾ.ರಾಜ್‌ಕುಮಾರ್ ಅವರನ್ನು ವೀರಪ್ಪನ್ ಮೂರು ತಿಂಗಳ ಕಾಲ ಅಪಹರಣ ಮಾಡಿದ್ದ. ಆಗ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟಗಳು ನಡೆದಿದ್ದವು. ಬಳಿಕ ಕೃಷ್ಣ ಅವರು ಅಂದಿನ ತಮಿಳುನಾಡು ಸಿಎಂ ಕರುಣಾನಿಧಿ ಅವರೊಂದಿಗೆ ಮಾತುಕತೆ ನಡೆಸಿ, ಬಳಿಕ ವೀರಪ್ಪನ್ ಸಂಪರ್ಕ ಮಾಡಿ ರಾಜ್‌ಕುಮಾರ್ ಅವರನ್ನು ಕ್ಷೇಮವಾಗಿ ಕರೆತರಲಾಯಿತು. ಇನ್ನೂ ಇದೇ ವೇಳೆ ರಾಜ್ಯದಲ್ಲಿ ಬರಗಾಲವಿತ್ತು. ಜನರ ರಕ್ಷಣೆಗೆ ವೈಜ್ಞಾನಿಕವಾಗಿ ಮೋಡ ಬಿತ್ತನೆ ಮಾಡಿ ಮಳೆ ಬರಿಸಲು ಸಹ ಕೃಷ್ಣ ಅವರು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ಈ ಯೋಜನೆ ಕೈಕೊಟ್ಟಿತು. ತಮಿಳುನಾಡು ಕಾವೇರಿ ನೀರಿಗಾಗಿ ಕ್ಯಾತೆಯನ್ನು ಸಹ ತೆಗೆದಿತ್ತು. ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ತೀವ್ರ ಸ್ವರೂಪದ ಹೋರಾಗಳು ನಡೆದಿದ್ದವು.
ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದ ವೇಳೆ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿದ್ದು, ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ, ಯಶಸ್ವಿನಿ ಯೋಜನೆ, ಬೆಂ-ಮೈ ಹೆದ್ದಾರಿ, ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿ ಮಾಡಿದರು. ಜೊತೆಗೆ ಐಟಿ ಬಿಟಿಯಲ್ಲಿ ಬಹುದೊಡ್ಡ ಕ್ರಾಂತಿ ಸೇರಿದಂತೆ ಇನ್ನೂ ಹತ್ತಾರು ಅಭಿವೃದ್ಧಿ ಕೆಲಸಗಳು ಇಂದಿಗೂ ಸ್ಮರಣೀಯವಾಗಿವೆ.ಇದನ್ನೂ ಓದಿ: ಅಣ್ಣಾವ್ರಿಗೆ ಮರು ಜೀವ ಕೊಟ್ಟಿದ್ದೇ ಎಸ್‌ಎಂ ಕೃಷ್ಣ: ಸಾರಾ ಗೋವಿಂದು