ವಸತಿ ಶಾಲೆಯಲ್ಲಿ ಘೋಷವಾಕ್ಯ ಬದಲು; ಅಧಿಕಾರಿಯ ವಿರುದ್ಧ ಕ್ರಮ ವಹಿಸಿ: ಅಶೋಕ್ ಒತ್ತಾಯ

Public TV
2 Min Read
R ASHOK

ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದಲ್ಲಿ ಎಲ್ಲಾ ಅಧಿಕಾರ ಅಧಿಕಾರಿಗಳ ಕೈಯಲ್ಲೇ ಇದ್ದು, ಸಚಿವರು ಮನೆಯಲ್ಲಿ ಮಜಾ ಮಾಡುತ್ತಿದ್ದಾರೆ. ವಸತಿ ಶಾಲೆಯಲ್ಲಿ (Residential School) ರಾಷ್ಟ್ರಕವಿ ಕುವೆಂಪು ಅವರ ವಾಣಿಯನ್ನು ಬದಲಿಸಿದ ಅಧಿಕಾರಿಯ ವಿರುದ್ಧ ಕೂಡಲೇ ಕ್ರಮ ವಹಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ಹುಚ್ಚುಚ್ಚಾಗಿ ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಿದ್ದಾರೆ. ವಿಧಾನಸೌಧದ ಮುಂಭಾಗ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಘೋಷವಾಕ್ಯವಿದೆ. ಯಾರೋ ಕಾರ್ಯದರ್ಶಿಗಳು ಬಂದು ಅದನ್ನು ತೆಗೆದುಹಾಕಿ ಎಂದರೆ ಹೇಗಿರುತ್ತದೆ? ಶಾಲೆಯಲ್ಲಿ ಕೈ ಮುಗಿದು ಒಳಗೆ ಬನ್ನಿ ಎಂದರೆ ತಪ್ಪೇನು? ಬೇರೆ ದೇಶದ ಅಧ್ಯಕ್ಷರು ನಮ್ಮ ದೇಶಕ್ಕೆ ಬಂದರೆ ಕೈ ಮುಗಿಯುತ್ತಾರೆ. ಇದೇ ನಮ್ಮ ಸಂಸ್ಕೃತಿ ಎಂದರು. ಇದನ್ನೂ ಓದಿ: ಬಿಎಂಟಿಸಿ ನೌಕರರಿಗೆ 1 ಕೋಟಿ ರೂ. ಅಪಘಾತ ವಿಮೆ ಜಾರಿ

ಈ ಕಾಂಗ್ರೆಸ್ ಸರ್ಕಾರಕ್ಕೆ ಕೇಡುಗಾಲ ಬಂದಿದೆ. ಯಾವುದೇ ಆದೇಶವೇ ಇಲ್ಲದೆ ಈ ಘೋಷವಾಕ್ಯವನ್ನು ಬದಲಿಸಿದ್ದಾರೆ. ಇಲ್ಲಿ ಸರ್ಕಾರ ಸತ್ತಿದೆಯೇ ಬದುಕಿದೆಯೇ ಎಂದು ಗೊತ್ತಿಲ್ಲ. ಕಳೆದ ಬಾರಿ ಇದ್ದ ಸಿದ್ದರಾಮಯ್ಯ ಈಗ ಇಲ್ಲ. ಅವರಿಗೆ ಸರ್ಕಾರದ ಮೇಲೆ ಯಾವುದೇ ಹಿಡಿತವೂ ಇಲ್ಲ. ಅವರು ಆಯವ್ಯಯವನ್ನು ಮಂಡಿಸಿದಾಗಲೇ ಅವರು ಮಂಡಿಸಿದ್ದಲ್ಲ ಎಂದು ಗೊತ್ತಾಯಿತು ಎಂದು ಕಿಡಿಕಾರಿದರು. ಇದನ್ನೂ ಓದಿ: ಕುವೆಂಪು ಘೋಷವಾಕ್ಯ ತೆಗೆದುಹಾಕಲು ಸರ್ಕಾರ ಆದೇಶಿಸಿಲ್ಲ: ಸಚಿವ ಮಹದೇವಪ್ಪ

ಅಧಿಕಾರಿಗಳು ಸಚಿವರು, ಮುಖ್ಯಮಂತ್ರಿಗಳನ್ನು ಕೇಳದೆ ಬೇಕಾಬಿಟ್ಟಿಯಾಗಿ ಆದೇಶ ಮಾಡುತ್ತಿದ್ದಾರೆ ಎಂದರೆ, ಇಲ್ಲಿ ಯಾರಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಮಕ್ಕಳಿಗೆ ಪಾಠ ಅರ್ಥವಾಗಿಲ್ಲ ಎಂದರೆ ಶಿಕ್ಷಕರ ಬಳಿ ಪ್ರಶ್ನೆ ಮಾಡಬೇಕು. ಆದರೆ ಮಕ್ಕಳು ಧೈರ್ಯದಿಂದ ಯಾರಿಗೆ ಪ್ರಶ್ನೆ ಮಾಡಬೇಕು? ಇಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ ಎಂದು ಎಲ್ಲೂ ಬಳಸಿಲ್ಲ. ಈ ಸರ್ಕಾರ ದಿಕ್ಕು ದೆಸೆ ಇಲ್ಲದೆ ಎಡಬಿಡಂಗಿಯಾಗಿದ್ದು, ಅಧಿಕಾರಿಗಳ ಕೈಗೆ ಅಧಿಕಾರ ನೀಡಿ ಎಲ್ಲರೂ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಒಂದು ಉದಾಹರಣೆಯಲ್ಲೇ ಸರ್ಕಾರಿ ಇಲಾಖೆಗಳು ಹೇಗೆ ಕೆಲಸ ಮಾಡುತ್ತಿದೆ ಎಂದು ತಿಳಿಯುತ್ತದೆ ಎಂದು ದೂರಿದರು. ಇದನ್ನೂ ಓದಿ: ʻಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿʼ – ಬರಹ ಬದಲಾವಣೆ ಸಮರ್ಥಿಸಿಕೊಂಡ ಲಕ್ಷ್ಮಿ ಹೆಬ್ಬಾಳ್ಕರ್‌

Share This Article