ಹೈದರಾಬಾದ್: ಖ್ಯಾತ ತೆಲುಗು ನಟಿ ತಮನ್ನಾ ಭಾಟಿಯಾ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆಯಲು ಯತ್ನಿಸಿರುವ ಘಟನೆ ಹೈದರಾಬಾದ್‍ನ ನಾರಾಯಂಗುಡಾದಲ್ಲಿ ನಡೆದಿದೆ.
ಭಾನುವಾರ ಹಿಮ್ಮತ್ ನಗರದ ಜ್ಯುವೆಲ್ಲರಿ ಶೋ ರೂಂ ಉದ್ಘಾಟನೆಗೆ ನಟಿ ತಮನ್ನಾ ಆಗಮಿಸಿದ್ದರು. ಅಂತೆಯೇ ತಮನ್ನಾ ಶೋ ರೂಂ ಉದ್ಘಾಟನೆ ಮಾಡಿ ಹೊರಬರುವ ವೇಳೆ ವ್ಯಕ್ತಿಯೊಬ್ಬ ಇವರಿಗೆ ಗುರಿಯಿಟ್ಟು ಚಪ್ಪಲಿ ಎಸೆದಿದ್ದಾನೆ. ಆದರೆ ಅದು ಗುರಿ ತಪ್ಪಿ ಮಳಿಗೆಯ ಸಿಬ್ಬಂದಿ ಮೇಲೆ ಬಿದ್ದಿದೆ. ತಕ್ಷಣವೇ ಅಭಿಮಾನಿಗಳನ್ನು ನಿಯಂತ್ರಿಸಿ ತಮನ್ನಾ ಅವರನ್ನು ರಕ್ಷಿಸಲು ಅವರ ಬಾಡಿಗಾರ್ಡ್ಸ್ ಮುಂದಾಗಿದ್ದಾರೆ.
ಈ ಘಟನೆಯಿಂದ ತಮನ್ನಾ, ಶೋ ರೂಂ ಮಾಲೀಕರು ಹಾಗೂ ಪೊಲೀಸರು ಕೂಡ ದಿಗ್ಭ್ರಮೆಗೊಂಡಿದ್ದು, ತಕ್ಷಣ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಳಿಕ ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಚಪ್ಪಲಿ ಎಸೆದ ವ್ಯಕ್ತಿ ಬಿಟೆಕ್ ಪದವೀಧರನಾಗಿದ್ದು, ಮುಶೀರಾಬಾದ್ ನಿವಾಸಿ ಕರಿಮುಲ್ಲಾ ಎಂದು ಗುರುತಿಸಲಾಗಿದೆ. ಈತ ತಮನ್ನಾರ ಅಭಿಮಾನಿಯಾಗಿದ್ದು, ಇತ್ತೀಚಿನ ಚಿತ್ರಗಳಲ್ಲಿ ತಮನ್ನಾ ನಟನೆಯ ಬಗ್ಗೆ ಕರಿಮುಲ್ಲಾ ಅಸಮಾಧಾನ ಹೊಂದಿದ್ದನು ಎನ್ನಲಾಗಿದೆ.
ಪ್ರಸ್ತುತ ತಮನ್ನಾ ಬಾಲಿವುಡ್ ಬ್ಲಾಕ್ ಮಾಸ್ಟರ್ `ರಾಣಿ’ ರೀಮೇಕ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.