ನವದೆಹಲಿ: ಎಟಿಎಂ ಕಾರ್ಡ್ ದುರ್ಬಳಕೆ ತಡೆಯುವ ಹಿನ್ನೆಲೆಯಲ್ಲಿ ದೆಹಲಿಯ ರಾಜ್ಯಮಟ್ಟದ ಬ್ಯಾಂಕರ್ಸ್ ಸಮಿತಿ (ಎಸ್‍ಎಲ್‍ಬಿಸಿ) ಹೊಸ ಚಿಂತನೆಗೆ ಮುಂದಾಗಿದೆ. ಈ ಸಮಿತಿ ಎರಡು ಎಟಿಎಂ ವ್ಯವಹಾರ ನಡುವೆ ಸಮಯ ನಿಗದಿಗೆ ಚಿಂತನೆ ನಡೆಸಿದೆ.
ಒಂದು ವೇಳೆ ಎಸ್‍ಎಲ್‍ಬಿಸಿ ಸಮಿತಿಯ ಪ್ರಸ್ತಾವವನ್ನು ಬ್ಯಾಂಕ್ ಒಪ್ಪಿಕೊಂಡಲ್ಲಿ ಈ ಹೊಸ ನಿಯಮ ಜಾರಿಯಾಗುವ ಸಾಧ್ಯತೆಗಳಿವೆ. ಒಂದು ಎಟಿಎಂ ಕಾರ್ಡ್ ನ ಎರಡು ವ್ಯವಹಾರಗಳ ನಡುವೆ ಅಂದಾಜು 6 ರಿಂದ 12 ಗಂಟೆ ಸಮಯ ನಿಗದಿಗೆ ಸಮಿತಿ ಸಲಹೆ ನೀಡಿದೆ. ಅಂದ್ರೆ ಒಮ್ಮೆ ನೀವು ಎಟಿಎಂನಿಂದ ಹಣ ತೆಗೆದರೆ ಪುನಃ 6 ರಿಂದ 12 ಗಂಟೆವರೆಗೆ ಅದೇ ಕಾರ್ಡ್ ನಿಂದ ಡ್ರಾ ಮಾಡಲು ಸಾಧ್ಯವಾಗಲ್ಲ. ಈ ಬಗ್ಗೆ ಕೇವಲ ಚರ್ಚೆಗಳು ನಡೆದಿದ್ದು, ಕಾರ್ಯರೂಪಕ್ಕೆ ಬಂದಿಲ್ಲ.
- Advertisement -
- Advertisement -
ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿಯ ಎಸ್‍ಎಲ್‍ಬಿಸಿ ಸಂಯೋಜಕರು ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಎಂಡಿ, ಸಿಇಓ ಮುಕೇಶ್ ಕುಮಾರ್ ಜೈನ್, ಎಟಿಎಂನಲ್ಲಿ ಕಾರ್ಡ್ ದುರ್ಬಳಕೆ ಅಪರಾಧ ಪ್ರಕರಣಗಳು ಹೆಚ್ಚಾಗಿ ರಾತ್ರಿ ಮತ್ತು ಬೆಳಗಿನ ಜಾವದ ನಡುವೆಯೇ ಹೆಚ್ಚಾಗಿ ನಡೆದಿವೆ. ಈ ನಿಗದಿತ ಸಮಯದಲ್ಲಿ ಕಾರ್ಡ್ ದುರ್ಬಳಕೆ ಹೆಚ್ಚಾಗಿ ಕಂಡು ಬಂದಿದೆ. ಸಮಿತಿ ನಮ್ಮ ಮುಂದೆ ಪ್ರಸ್ತಾವವನ್ನು ಇಟ್ಟಿದ್ದು, ಕಳೆದ ಒಂದು ವಾರದಿಂದ 18 ಬ್ಯಾಂಕ್ ಗಳ ಪ್ರತಿನಿಧಿಗಳು ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
- Advertisement -
2018-19ರ ವೇಳೆ ದೆಹಲಿಯಲ್ಲಿ 179, ಮಹಾರಾಷ್ಟ್ರದಲ್ಲಿ 233 ಎಟಿಎಂ ವಂಚನೆ ಪ್ರಕರಣಗಳು ದಾಖಲಾಗಿವೆ. 2018-19ರ ಅವಧಿಯಲ್ಲಿ ಇದೂವರೆಗೂ ದೇಶದೆಲ್ಲಡೆ 980ಕ್ಕೂ ಅಧಿಕ ದೂರು ದಾಖಲಾಗಿವೆ. ಕಳೆದ ವರ್ಷ 911 ಪ್ರಕರಣಗಳು ದಾಖಲಾಗಿತ್ತು. ಇತ್ತೀಚೆಗೆ ಎಟಿಎಂ ಕಾರ್ಡ್ ಕ್ಲೋನಿಂಗ್ (ಬಳಕೆದಾರರ ಮಾಹಿತಿಯ ಕಳ್ಳತನ) ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ ವಿದೇಶಿ ಪ್ರಜೆಗಳು ಭಾಗಿಯಾಗಿರುವ ಶಂಕೆಗಳು ವ್ಯಕ್ತವಾಗಿವೆ.
- Advertisement -
ಎಟಿಎಂನಿಂದ ಹೆಚ್ಚಿನ ಹಣ ಡ್ರಾ ಮಾಡುವಾಗ ಗ್ರಾಹಕರ ಮೊಬೈಲ್ ಗೆ ಸಂದೇಶ ಕಳುಹಿಸಿ, ಓಟಿಪಿ ನಂಬರ್ ಪಡೆಯುವ ವ್ಯವಸ್ಥೆ ರೂಪಿಸಲು ಸಹ ಚಿಂತಿಸಲಾಗಿದೆ. ಈ ರೀತಿಯ ವ್ಯವಸ್ಥೆಯಿಂದ ಡೆಬಿಟ್, ಕ್ರೆಡಿಟ್ ಕಾರ್ಡ್ ಗಳ ದುರ್ಬಳಕೆ ತಡೆಯಲು ಸಾಧ್ಯವಾಗಲಿದೆ. ಬೇರೆಯವರು ನಿಮ್ಮ ಕಾರ್ಡ್ ನಿಂದ ಹಣ ಡ್ರಾ ಮಾಡುತ್ತಿದ್ದರೆ, ಮೆಸೇಜ್ ಮೂಲಕ ಎಚ್ಚೆತ್ತುಕೊಳ್ಳಬಹುದು ಎಂದು ಮುಕೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.