ಬೆಂಗಳೂರು: ನಾಡಿನ ಹಿರಿಯ ಸಾಹಿತಿ, ಕಾದಂಬರಿಕಾರ, ಸಂಶೋಧಕ, ಸರಸ್ವತಿ ಸಮ್ಮಾನ್ ಪುರಸ್ಕೃತ ಪದ್ಮಭೂಷಣ ಡಾ. ಎಸ್ ಎಲ್ ಭೈರಪ್ಪ (S L Bhyrappa) ಅವರ ನಿಧನದ ಸುದ್ದಿ ಅತ್ಯಂತ ದುಃಖವನ್ನುಂಟುಮಾಡಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ಸಂತಾಪ ವ್ಯಕ್ತಪಡಿಸಿದೆ.
ಹೇಳಿಕೆಯಲ್ಲಿ ಏನಿದೆ?
ಪರ್ವ, ಗೃಹಭಂಗ, ಧರ್ಮಶ್ರೀ, ಮಂದ್ರ, ಭಿತ್ತಿ, ಸಾರ್ಥ, ಆವರಣ ಸೇರಿದಂತೆ ಹಲವಾರು ಕೃತಿಗಳ ತಮ್ಮ ವಿಶಿಷ್ಟ ಬರಹಶೈಲಿಯ ಮೂಲಕ ನಾಡಿನ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಎಸ್ ಎಲ್ ಭೈರಪ್ಪನವರು ಸಾರಸ್ವತ ಲೋಕಕ್ಕೆ ಗಣನೀಯ ಕೊಡುಗೆ ಸಲ್ಲಿಸಿದವರು. ಕನ್ನಡ ಸಾಹಿತ್ಯದ ಸಾಕ್ಷಿಪ್ರಜ್ಞೆಯೇ ಆಗಿದ್ದು, ತಮ್ಮ ಸಾಹಿತ್ಯದಲ್ಲಿ ಈ ನಾಡಿನ ಶ್ರೀಮಂತ ಇತಿಹಾಸ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಮೂಲಕ ವೈಚಾರಿಕ ಕ್ಷೇತ್ರದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಇದನ್ನೂ ಓದಿ: ಎಸ್.ಎಲ್.ಭೈರಪ್ಪಗೆ ಸಿನಿಮಾ ನಂಟು – ಕಾದಂಬರಿ ಆಧರಿತ ಸಿನಿಮಾಗಳಲ್ಲಿ ವಿಷ್ಣು ಸೇರಿ ಖ್ಯಾತ ನಟರ ಅಭಿನಯ
ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದ ಭೈರಪ್ಪನವರು ರಾಷ್ಟ್ರೋತ್ಥಾನ ಸಾಹಿತ್ಯ, ಮಂಥನ, ಮಂಗಳೂರು ಲಿಟ್ ಫೆಸ್ಟ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ʼಮೋದಿ ಪ್ರಧಾನಿಯಾದ ಕಾರಣದಿಂದ ನನಗೆ ಪದ್ಮಭೂಷಣ ಸಿಕ್ಕಿದೆʼ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ಎಸ್ ಎಲ್ ಭೈರಪ್ಪನವರ ನಿಧನಕ್ಕೆ ಸಂತಾಪಗಳನ್ನು ವ್ಯಕ್ತಪಡಿಸುತ್ತಾ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದೇವೆ. ಅವರ ಕುಟುಂಬ ಮತ್ತು ಅಸಂಖ್ಯ ಅಭಿಮಾನಿಗಳಿಗೆ ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಹಾಗೂ ಅಗಲಿದ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

