ದಾವಣಗೆರೆ: ಹೊಸದಾಗಿ ನಿರ್ಮಾಣವಾಗಿರುವ ಖಾಸಗಿ ಲೇಔಟ್ ಒಂದರ ಒಳಚರಂಡಿ ಛೇಂಬರ್ ನಲ್ಲಿ ಪುರಷನದ್ದು ಎಂದು ಶಂಕಿಸಲಾದ ಅಸ್ಥಿಪಂಜರ ದೊರೆತ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ನಗರದ ಶಿವಮೊಗ್ಗ ರಸ್ತೆಯ ಶ್ರೀ ಹರಿಹರರೇಶ್ವರ ಲೇಔಟ್ ಹಿಂಭಾಗದಲ್ಲಿನ ಹೊಸ ಲೇಔಟ್ ನಲ್ಲಿ ಕೆಲಸಗಾರರು ಯುಜಿಡಿ ಛೇಂಬರ್ ಸಂಪರ್ಕ ಕಲ್ಪಿಸಲು ಮುಂಜಾನೆ ಛೇಂಬರ್‍ನ ಮುಚ್ಚಳ ತೆರೆದಾಗ ಅಸ್ಥಿಪಂಜರ ಇರುವುದನ್ನು ನೋಡಿ ಭಯಗೊಂಡು ಕೂಡಲೇ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನದ ಪ್ರಯೋಗಾಲಯದ ಅಧಿಕಾರಿಗಳು ನಗರಸಭೆಯ ಪೌರ ಕಾರ್ಮಿಕರಿಂದ ಅಸ್ಥಿ ಪಂಜರವನ್ನು ಛೇಂಬರ್ ನಿಂದ ಮೇಲೆತ್ತಿ, ಪರೀಕ್ಷಿಸಲಾಯಿತು.
Advertisement
Advertisement
ಪ್ರಾಥಮಿಕ ಪರೀಕ್ಷೆಯನ್ನು ದಾವಣಗೆರೆ ಸಿ.ಜಿ ಆಸ್ಪತ್ರೆಯ ಡಾ. ಮೋಹನ್ ಕುಮಾರ್ ಗುರುತಿಸಿದಂತೆ ಮೃತ ವ್ಯಕ್ತಿಯು ಅಂದಾಜು 5.4 ಅಡಿ ಎತ್ತರ, ಸುಮಾರು 25 ರಿಂದ 30 ವರ್ಷದ ಒಳಗೆ ಇದ್ದಾನೆ. ಸುಮಾರು ಆರು ತಿಂಗಳ ಹಿಂದೆ ಈ ಘಟನೆ ನೆಡೆದಿರಬಹುದು ಎಂದು ಊಹಿಸಿದರು. ವ್ಯಕ್ತಿಯ ಉಡುದಾರ, ಮೆಟಲ್ ಕೈ ಬಳೆ, ಕೊರಳು ದಾರ ಸಿಕ್ಕಿದ್ದು ಪುರುಷನೆಂದು ತಿಳಿದು ಬಂದಿದೆ. ನಂತರ ಅಸ್ಥಿ ಪಂಜರವನ್ನು ವಿಧಿವಿಜ್ಞಾನದ ಪ್ರಯೋಗಾಲಯದ ಅಧಿಕಾರಿಗಳು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ. ವರದಿ ಬಂದ ನಂತರ ಈ ವ್ಯಕ್ತಿ ಯಾರು ಮತ್ತು ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಗ್ರಾಮಾಂತರ ಡಿವೈಎಸ್‍ಪಿ ಮಂಜುನಾಥ್ ಕೆ.ಗಂಗಲ ತಿಳಿಸಿದರು.
Advertisement
Advertisement
ಸ್ಥಳಕ್ಕೆ ಆಗಮಿಸಿದ ಸಿಪಿಐ ಶಿವಪ್ರಸಾದ್ ಅವರ ನೇತೃತ್ವದ ತಂಡ ಪರಿಶೀಲನೆ ನಡೆಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕಿ ಡಾ. ಭಾರ್ಗವಿ ಮತ್ತಿತರು ಇದ್ದರು.