ಹುಬ್ಬಳ್ಳಿ: ಯುವತಿಯರನ್ನು ಚುಡಾಯಿಸುತ್ತಿದ್ದ ಆರು ಜನ ಯುವಕರನ್ನು ನಗರದ ಬೆಂಡಿಗೇರಿ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿಯ ಮೊಹಮ್ಮದ್ ಗೌಸ್ ಧಾರವಾಡ, ಸೊಹೇಲ್ ಅಹ್ಮದ್, ಅಖ್ತರ್ ರಜಾ ಶಿವಳ್ಳಿ, ದಾವಲಸಾಬ್, ರಿಜ್ವಾನ್, ಅಲ್ತಾಫ್ ಮಿಶ್ರಿಕೋಟಿ ಬಂಧಿತ ಯುವಕರು.
ಬಂಧಿತ ಯುವಕರು ನಗರದಾದ್ಯಂತ ಸುತ್ತುತ್ತ ಕಾಲೇಜು, ಶಾಪಿಂಗ್ ಮಾಲ್ ಗಳಲ್ಲಿ ಯುವತಿಯರನ್ನು ಚುಡಾಯಿಸುತ್ತಿದ್ದರು. ಅಷ್ಟೇ ಅಲ್ಲದೆ ರಸ್ತೆ ವ್ಹೀಲಿಂಗ್ ಮಾಡುತ್ತ, ಚೀರಾಡುತ್ತಲೇ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಹೀಗಾಗಿ ಅವರನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದರು. ಆದರೆ ಆರೋಪಿಗಳು ಪೊಲೀಸರನ್ನು ನೋಡುತ್ತಿದ್ದಂತೆ ಪರಾರಿಯಾಗುತ್ತಿದ್ದರು.
Advertisement
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್, ಡಿಸಿಪಿ ರೇಣುಕಾ ಸುಕುಮಾರ್ ಅವರ ಮಾರ್ಗದರ್ಶನದ ಮೇರೆಗೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು. ಬುಧವಾರ ಮಫ್ತಿ ವೇಷದಲ್ಲಿ ಮಹಿಳಾ ಪೊಲೀಸರು ನೆಹರೂ ಕಾಲೇಜು ಬಳಿ ಹೋಗಿದ್ದರು. ಈ ವೇಳೆ ಕಾಲೇಜಿನ ಹೊರಗೆ ನಿಂತಿದ್ದ 6 ಜನ ಆರೋಪಿಗಳು ಯುವತಿಯರನ್ನು ಚುಡಾಯಿಸುತ್ತಿದ್ದರು. ತಕ್ಷಣವೇ ಅವರನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ.