ಚಿಕ್ಕಮಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಾಡಲ್ಲಿ ಎ.ಎನ್.ಎಫ್. ಪೊಲೀಸರ ಒಂದೇ ಒಂದು ಎನ್ ಕೌಂಟರ್‌ಗೆ ಕೆಂಪು ಉಗ್ರರಲ್ಲಿ ನಡುಕ ಹುಟ್ಟಿದೆ. ಎರಡು ದಶಕಗಳ ಕಾಲ ಹೋರಾಡ್ದೋರು-ಹಾರಾಡ್ದೋರು ಒಂದೇ ಒಂದು ಎನ್‌ಕೌಂಟರ್‌ಗೆ ಫುಲ್ ಸೈಲೆಂಟ್.
ಕೇರಳದಿಂದ ಬಂದು ಕಾಫಿನಾಡ ಕಾಡಲ್ಲಿ ಪಸರಿಸಿದ್ದ ನಕ್ಸಲರು ವಿಕ್ರಂಗೌಡ ಹತನಾದ ಬಳಿಕ ಎ.ಎನ್.ಎಫ್. ಕೂಂಬಿಂಗ್ ಮಾಡಿದ್ರು ಸಿಕ್ಕಿರಲಿಲ್ಲ. ಆದರೀಗ, ಮೋಸ್ಟ್ ವಾಂಟೆಡ್ ನಕ್ಸಲ್ ಮುಂಡಗಾರು ಲತಾ ಸೇರಿ 6 ಜನ ಸಮಾಜದ ಮುಖ್ಯ ವಾಹಿನಿ ಹೆಸರಲ್ಲಿ ಶರಣಾಗತಿಯಾಗೋಕೆ ಮುಂದಾಗಿದ್ದಾರೆ. ಪೊಲೀಸರ ಕೂಂಬಿಂಗ್ ಚುರುಕು. ಮಲೆನಾಡಿಗರ ಬೆಂಬಲವೂ ಇಲ್ಲ. ಸೋ, ಸಿಎಂ ಗ್ರೀನ್ ಸಿಗ್ನಲ್ ದಾರಿ ಕಾಯ್ತಿದ್ದ ನಕ್ಸಲರು ಇದೀಗ ಶರಣಾಗತಿಯಾಗೋಕೆ ಮುಂದಾಗಿದ್ದಾರಂತೆ.
2014ರ ಬಳಿಕ ಜಿಲ್ಲೆಯ ಕಾಡಲ್ಲಿ ಕೆಂಪು ಉಗ್ರರ ಹೆಜ್ಜೆ ಗುರುತು ಕಂಡಿರಲಿಲ್ಲ. ಪೊಲೀಸರ ಗುಂಡಿನ ಸದ್ದು ಕೇಳಿರ್ಲಿಲ್ಲ. ಆದರೆ, ಮೂರ್ನಾಲ್ಕು ತಿಂಗಳ ಹಿಂದೆ ನಕ್ಸಲರ ಹೆಜ್ಜೆ ಗುರುತು ಕಂಡಿತ್ತು. ಪೊಲೀಸರ ಗುಂಡಿನ ಶಬ್ಧವೂ ಕೇಳಿತ್ತು. ಒಂದು ಎನ್‌ಕೌಂಟರ್ ಕೂಡ ಆಗಿತ್ತು. ಕೇರಳದಿಂದ ಬಂದಿದ್ದ ನಕ್ಸಲರು ಚಿಕ್ಕಮಗಳೂರು-ಉಡುಪಿ ಭಾಗವನ್ನ ಮುಂಡಗಾರು ಲತಾ-ವಿಕ್ರಂ ಗೌಡ ನಾಯಕತ್ವ ವಹಿಸಿದ್ರು. ಆದರೆ, ಉಡುಪಿ ಕಾಡಲ್ಲಿ ಪೊಲೀಸರ ತುಪಾಕಿ ನಳಿಕೆಯಿಂದ ಹಾರಿದ ಗುಂಡು ವಿಕ್ರಂಗೌಡನ ಎದೆ ಸೀಳಿತ್ತು. ಗುಂಡಿನ ಶಬ್ಧಕ್ಕೆ ಮುಂಡಗಾರು ಲತಾ ತಂಡ ಫುಲ್ ಸೈಲೆಂಟ್ ಆಗಿತ್ತು.
ಆದ್ರೆ, ಎಎನ್‌ಎಫ್ ಪೊಲೀಸರು ಕೂಂಬಿಂಗ್ ಮಾತ್ರ ನಿಲ್ಸಿರ್ಲಿಲ್ಲ. ಮತ್ತಷ್ಟು ಆಕ್ಟೀವ್ ಆಗಿದ್ರು. ಆದ್ರೆ, ಒಂದೇ ಒಂದು ಎನ್‌ಕೌಂಟರ್‌ಗೆ ನಕ್ಸಲರ ಹೆಸರಿಲ್ಲದಂತೆ ನಾಪತ್ತೆಯಾಗಿದ್ರು. ಮತ್ತೆ ಕೇರಳ ಹೋದ್ರಾ ಎಂಬ ಅನುಮಾನಗಳ ಮಧ್ಯೆಯೇ ನಕ್ಸಲರ ಶರಣಾಗತಿ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಆದರೆ, ಖಾಕಿಪಡೆ ಮಾತ್ರ ಶರಣಾಗತಿ ಸುದ್ದಿಯನ್ನ ಸಾರಾಸಗಟಾಗಿ ತಿರಸ್ಕರಿಸಿದೆ. ತೆರೆಮರೆಯ ಕಸರತ್ತನ್ನಂತು ನಡೆಸುತ್ತಿದೆ. ಜೊತೆಗೆ, ಸರ್ಕಾರ ಕೂಡ ವಿವಿಧ ಪ್ಯಾಕೇಜ್ ಘೋಷಿಸಿ ನಕ್ಸಲರಿಗೆ ಶರಣಾಗುವಂತೆ ಸೂಚಿಸಿದೆ.
ಕಳೆದ ವಾರವಷ್ಟೆ ನಕ್ಸಲರು ಶರಣಾಗತಿಗೆ ಸಿಎಂ ಸಿದ್ದರಾಮಯ್ಯ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ರು. ಇದರ ಬೆನ್ನಲ್ಲೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಕೂಡ ಅದನ್ನೇ ಪುನರುಚ್ಚರಿಸಿದ್ದರು. ಎಬಿಸಿ ಎಂಬ ಮೂರು ಗುಂಪು ಮಾಡಿದ್ರು. ಅಂದ್ರೆ, ರಾಜ್ಯದವರು, ಹೊರಗಿನವರು ಹಾಗೂ ಸಿಂಪಥೈಸರ್ಸ್ ಗಳಿಗೂ ಸ್ಪೆಷಲ್ ಪ್ಯಾಕೇಜ್ ಆಫರ್ ನೀಡಿದ್ರು.
ಈ ಶರಣಾಗತಿ ಪ್ರಹಸನದ ಮಧ್ಯೆಯೇ ಆರು ನಕ್ಸಲರು ಮುಂಡುಗಾರು ಲತಾ, ವನಜಾಕ್ಷಿ, ಸುಂದರಿ, ಮಾರೆಪ್ಪ ಅರೋಲಿ, ವಸಂತ್, ಜೀಶ್ ಹೆಸರು ಕೇಳಿ ಬರ್ತಿದೆ. ವಾರದಲ್ಲಿ ಆಗ್ತಾರೋ ತಿಂಗಳಾಗುತ್ತೋ, ಆಗೋದೇ ಇಲ್ವೋ ಗೊತ್ತಿಲ್ಲ. ಆದ್ರೆ, ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ಶಾಂತಿಗಾಗಿ ನಾಗರೀಕ ವೇದಿಕೆ ಸದಸ್ಯರು ಅಥವ ಮಲೆನಾಡ ಎಡಪಂಥೀಯ ಮುಖಂಡರು ಸಂಪರ್ಕ ಮಾಡಿರುವ ಸಾಧ್ಯತೆಯಿದೆ. ನಕ್ಸಲರ ಬೇಡಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ಯಂತ. ಆದರೆ, ಶರಣಾಗತಿಯಾದ ಮೇಲೆ ಆಗಬಹುದಾದ ಕೆಲ ಸಮಸ್ಯೆಗಳನ್ನ ಅರಿತು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿ ಇದ್ದದ್ದೇ ಎಂಟತ್ತು ನಕ್ಸಲರು. ಅವರು ಕೇರಳ ಹೋದ ಮೇಲೆ ಕಾಡು ಕ್ಲೀನ್ ಆಗಿತ್ತು. ಇದೀಗ ಮತ್ತೆ ಬಂದ ಬಳಿಕ ಒಂದು ಎನ್ ಕೌಂಟರ್ ಆಗಿದೆ. ಜನರ ಬೆಂಬಲವೂ ಇಲ್ಲ. ಕೂಂಬಿಂಗ್ ಚುರುಕು ಅನ್ನೋ ಕಾರಣಕ್ಕೆ ಭವಿಷ್ಯ ಇಲ್ಲ ಅಂತ ನಕ್ಸಲರಿಗೆ ಅನ್ನಿಸಿರಬೇಕು. ಅದಕ್ಕೆ ಶರಣಾಗತಿಗೆ ಮನಸ್ಸು ಮಾಡಿದ್ದಾರೆ. ಒಂದು ವೇಳೆ, ಎಲ್ಲರೂ ಶರಣಾಗತಿಯಾಗಿ ಸಮಾಜದ ಮುಖ್ಯವಾಹಿನಿಗೆ ಬಂದರೆ ಕೆಂಪು ಉಗ್ರರ ಹೆಜ್ಜೆ ಸದ್ದು-ಪೊಲೀಸರ ಗುಂಡಿನ ಸದ್ದಿನಿಂದ ಕರುನಾಡ ಕಾಡು ಮುಕ್ತವಾಗಲಿದೆ.