ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯ 6 ಮಂದಿ ಕಾಂಗ್ರೆಸ್ ಸದಸ್ಯರು ಅನರ್ಹಗೊಂಡಿದ್ದು, ಸಂಸದ ಡಾ.ಕೆ ಸುಧಾಕರ್ (K Sudhakar) ವಿರುದ್ಧ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಸೇಡು ತೀರಿಸಿಕೊಂಡಿದ್ದಾರೆ.
2024ರ ಸೆಪ್ಟೆಂಬರ್ 12 ರಂದು ನಡೆದ ಚಿಕ್ಕಬಳ್ಳಾಪುರ ನಗರಸಭೆ (City Muncipal Council Chikkaballapura) ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ ಕೆ ಸುಧಾಕರ್ ಇಬ್ಬರು ಸಹ ಚಿಕ್ಕಬಳ್ಳಾಪುರ ನಗರಸಭೆಯ ಗದ್ದುಗೆ ಹಿಡಿಯಬೇಕು, ತಮ್ಮದೇ ಬೆಂಬಲಿಗರು ಅಧ್ಯಕ್ಷ ಉಪಾಧ್ಯಕ್ಷರಾಗಬೇಕು ಅಂತ ಪಟ್ಟು ಹಿಡಿದು ಜಿದ್ದಿಗೆ ಬಿದ್ದಿದ್ದರು. ಅಂದು ಭಾರೀ ಹೈಡ್ರಾಮಾಗಳ ನಡುವೆ ನಡೆದ ಚುನಾವಣೆಯಲ್ಲಿ ಅಂತಿಮವಾಗಿ ಕಾಂಗ್ರೆಸ್‌ನ 6 ಮಂದಿ ಸದಸ್ಯರೇ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವೇ ಮತ ಚಲಾಯಿಸಿದ್ರು. ಕಾಂಗ್ರೆಸ್‌ನ (Congress) 6 ಮಂದಿ ಸದಸ್ಯರು ಸಂಸದ ಸುಧಾಕರ್ ಜೊತೆಯಲ್ಲೇ ಬಸ್ ನಲ್ಲಿ ಬಂದು ಸುಧಾಕರ್ ಬೆಂಬಲಿತ ಅಭ್ಯರ್ಥಿಗಳನ್ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ರು. ಇದ್ರಿಂದ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಜಿಲ್ಲಾಧಿಕಾರಿಗಳ ನ್ಯಾಯಾಲದ ಮೊರೆ ಹೋಗಿದ್ದು, ನ್ಯಾಯಾಲಯ 6 ತಿಂಗಳ ವಿಚಾರಣೆ ನಡೆಸಿ 6 ಮಂದಿ ಸದಸ್ಯರನ್ನ ಅನರ್ಹಗೊಳಿಸಿ ಆದೇಶ ಮಾಡಿದೆ.
ಅನರ್ಹರಾದವರು ಯಾರು..?
ಚಿಕ್ಕಬಳ್ಳಾಪುರ ನಗರಸಭೆಯ 2ನೇ ವಾರ್ಡಿನ ಸದಸ್ಯೆ ರತ್ನಮ್ಮ, 22ನೇ ವಾರ್ಡಿನ ಸ್ವಾತಿ ಮಂಜುನಾಥ್, 24ನೇ ವಾರ್ಡಿನ ಅಂಬಿಕಾ, 27ನೇ ವಾರ್ಡಿನ ನೇತ್ರಾವತಿ, 7ನೇ ವಾರ್ಡಿನ ಸತೀಶ್ ಹಾಗೂ 13ನೇ ವಾರ್ಡ್‌ನ ನಿರ್ಮಲಾಪ್ರಭುರನ್ನ ಅನರ್ಹಗೊಳಿಸಿ ಆದೇಶ ಮಾಡಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ನ್ಯಾಯಾಲಯದಲ್ಲಿ 6 ತಿಂಗಳ ಕಾಲ ನಡೆದ ಸುದೀರ್ಘ ವಿಚಾರಣೆ ಬಳಿಕ ಕಾಂಗ್ರೆಸ್ ಪಕ್ಷದ ಸದಸ್ಯರು ಪಕ್ಷ ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿತರಿಗೆ ಮತ ಹಾಕಿರುವುದು ಖಾತರಿಯಾಗಿದೆ. ಹೀಗಾಗಿ 6 ಮಂದಿಯನ್ನ ಅನರ್ಹಗೊಳಿಸಿ ಕೋರ್ಟ್ ಆದೇಶ ಮಾಡಲಾಗಿದೆ. ಈ ಮೂಲಕ ಶಾಸಕ ಪ್ರದೀಫ್ ಈಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿದವರಿಗೆ ತಕ್ಕ ಪಾಠ ಕಲಿಸಿದ್ದೇವೆ ಅಂತ ಪ್ರತಿಕ್ರಿಯಿಸಿದ್ದಾರೆ.
ಮುಂದೇನು…?
ಪಕ್ಷಾಂತರ ನಿಷೇಧದ ಆಧಿನಿಯಮದ ಪ್ರಕಾರ ಕಾಂಗ್ರೆಸ್ ಪಕ್ಷದಿಂದ ವಿಪ್ ನೀಡಿದ್ರೂ ವಿಪ್ ಉಲ್ಲಂಘಿಸಿ ವಿಪಕ್ಷದ ಅಭ್ಯರ್ಥಿಗೆ ಬೆಂಬಲಿಸಿ ಮತಚಲಾಯಿಸಿರುವ ಕಾರಣ 6 ಮಂದಿ ಕಾಂಗ್ರೆಸ್ ಸದಸ್ಯರನ್ನ ಅನರ್ಹಗೊಳಿಸಲಾಗಿದೆ. ಆದ್ರೆ ಸದ್ಯ 6 ಮಂದಿ ಅನರ್ಹ ಸದಸ್ಯರು ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟೀಲೇರೋ ತಯಾರಿಯಲ್ಲಿದ್ದಾರೆ. ಆದ್ರೆ ಹೈಕೋರ್ಟ್‍ನಲ್ಲಿ ಅದೇನಾಗುತ್ತೋ ಏನೋ…? ಅಷ್ಟರಲ್ಲೇ ನಗರಸಭಾ ಸದಸ್ಯರ ಅವಧಿಯೇ ಮುಕ್ತಾಯವಾದರೂ ಅಚ್ಚರಿ ಇಲ್ಲ.