ಬೆಂಗಳೂರು: ವಿಧಾನಸಭಾ ಸ್ಪೀಕರ್ ಕೆ.ಬಿ.ಕೋಳಿವಾಡ ಪುತ್ರಿಯರು ನಿಯಮ ಉಲ್ಲಂಘಿಸಿ ನಿವೇಶನ ಪಡೆದ ಆರೋಪ ಕೇಳಿಬಂದಿದೆ.
ಯಲಹಂಕ ಸಮೀಪದ ಗಸ್ತಿ ಕೆಂಪನಹಳ್ಳಿ, ಅಗ್ರಹಾರಗಳಲ್ಲಿ ಕೆಬಿ ಕೋಳಿವಾಡ ಅವರ ನಾಲ್ವರು ಪುತ್ರಿಯರು ನಿವೇಶನ ಪಡೆದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇವು ಕರ್ನಾಟಕ ವಿಧಾನಮಂಡಲ ಕಾರ್ಯಾಲಯ ನೌಕರರ ಗೃಹ ನಿರ್ಮಾಣ ಸಂಘದ ನಿವೇಶನಗಳಾಗಿವೆ. ಒಂದೇ ದಿನ ಕೋಳಿವಾಡ ಅವರ ನಾಲ್ವರು ಪುತ್ರಿಯರಿಗೆ ನಿವೇಶನ ನೋಂದಣಿಯಾಗಿದೆ.
Advertisement
Advertisement
ಕೋಳಿವಾಡ ಅವರ ಪುತ್ರಿಯರಾದ ಸಪ್ನಾ ಪಾಟೀಲ್, ಪ್ರತಿಭಾ ದೊಡ್ಡಮನಿ, ಸುನೀತಾ ಮೂಲಿಮನಿ ಹಾಗೂ ಸುಷ್ಮಾ ಮಂಜುನಾಥ್ ನಿವೇಶನ ಪಡೆದಿದ್ದಾರೆ. ಸುಷ್ಮಾ ಮಂಜುನಾಥ್ ಕೋಳಿವಾಡ ಅವರ ರಾಣೆಬೆನ್ನೂರು ಮನೆ ವಿಳಾಸ ನೀಡಿದ್ರೆ, ಉಳಿದ ಮೂವರು ಪುತ್ರಿಯರು ಕೋಳಿವಾಡ ಅವರ ಬೆಂಗಳೂರಿನ ಆರ್‍ಎಂವಿ ಲೇಔಟ್‍ನ ನಿವಾಸದ ವಿಳಾಸ ಕೊಟ್ಟಿದ್ದಾರೆ. 2016ರ ನವೆಂಬರ್ 7 ರಂದು ವಿಧಾನಮಂಡಲ ಕಾರ್ಯಾಲಯ ನೌಕರರ ಗೃಹ ನಿರ್ಮಾಣ ಸಂಘದ ಕಾರ್ಯಕಾರಿ ಸಭೆ ನಡೆದಿದ್ದು, ಈ ಸಭೆಯಲ್ಲೇ ಕೋಳಿವಾಡ ಪುತ್ರಿಯರಿಗೆ ನಿವೇಶನ ಹಂಚಿಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಬಳಿಕ ನವೆಂಬರ್ 14ರಂದೇ ನಾಲ್ವರು ಪುತ್ರಿಯರಿಗೆ ನಿವೇಶನ ನೋಂದಣಿ ಆಗಿದೆ. ಈ ನಾಲ್ವರು ಒಂದೇ ಬ್ಯಾಂಕಿನಲ್ಲಿ ಸಿಡಿ ತೆಗೆದಿದ್ದಾರೆ.
Advertisement
Advertisement
ಸಂಘದ ಬೈಲಾ ಪ್ರಕಾರ ವಿಧಾನಸಭೆ ಕಾರ್ಯಾಲಯದ ನೌಕರರು ಮಾತ್ರ ಸಂಘದ ಸದಸ್ಯರಾಗಬೇಕು. ಆದ್ರೆ ಕೋಳಿವಾಡ ಪುತ್ರಿಯರು ನೌಕರರಲ್ಲ. 2004-05 ರಲ್ಲಿ ಸಂಘದಿಂದ ಲೇಔಟ್ ಮಾಡಲು ವಂತಿಗೆ ಸಂಗ್ರಹಿಸಲಾಗಿದ್ದು, ಕೇವಲ 120 ಜನರಿಗೆ ಮಾತ್ರ ನಿವೇಶನ ಹಂಚಲಾಗಿದೆ. ಈ ಹಿಂದೆಯೂ ವಿಧಾನಸಭೆ ನೌಕರರ ಕಾರ್ಯಾಲಯ ಸಂಘ ಸದಸ್ಯರಲ್ಲದವರಿಗೂ ನಿವೇಶನ ಹಂಚಿಕೆ ಮಾಡಿದ ಆರೋಪ ಕೇಳಿಬಂದಿತ್ತು.