ಹಾಸನ: ಸಂತ್ರಸ್ತ ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಜೈಲುಪಾಲಾಗಿದ್ದರೆ, ಇತ್ತ ಪತ್ನಿ ಭವಾನಿಗೂ ಸಂಕಷ್ಟ ಎದುರಾಗಿದೆ.
ಕಿಡ್ನಾಪ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಮೊದಲನೇ ನೋಟೀಸ್ ನೀಡಿದ್ದು, ಇದಕ್ಕೆ ಉತ್ತರ ನೀಡದ ಹಿನ್ನೆಲೆಯಲ್ಲಿ ಎರಡನೇ ನೋಟೀಸ್ ಜಾರಿ ಮಾಡಿದೆ. ಸದ್ಯ ಭವಾನಿ ಬೆಂಗಳೂರಿನ ಬಸವಗುಡಿ ನಿವಾಸದಲ್ಲಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಹೆಚ್.ಡಿ.ರೇವಣ್ಣ ಹಾಗೂ ಭವಾನಿ ರೇವಣ್ಣ ಮತ್ತೋರ್ವ ಪುತ್ರ ಎಂಎಲ್‌ಸಿ ಸೂರಜ್ ರೇವಣ್ಣ (Suraj Revanna) ಮೌನಕ್ಕೆ ಜಾರಿದ್ದಾರೆ.
ಇತ್ತ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪೆನ್‌ಡ್ರೈವ್ ಅಶ್ಲೀಲ ವೀಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕೆ.ಆರ್.ನಗರ ಮೂಲದ ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದರೆ, ಪತ್ನಿ ಭವಾನಿ ರೇವಣ್ಣ ತೀವ್ರ ನೋವಿನಲ್ಲಿದ್ದಾರೆ. ಇದರ ನಡುವೆ ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡವು ಭವಾನಿ ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಎರಡನೇ ನೋಟಿಸ್ ನೀಡಿದ್ದು ಭವಾನಿ ರೇವಣ್ಣ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಳೆದ ಮೂರು ದಿನಗಳಿಂದ ಬೆಂಗಳೂರಿನ ಬಸವನಗುಡಿ ನಿವಾಸದಲ್ಲಿ ಭವಾನಿ ರೇವಣ್ಣ ಬೀಡು ಬಿಟ್ಟಿದ್ದಾರೆ. ಸದಾ ಜೊತೆಗಿರುತ್ತಿದ್ದ ಪತಿ ಜೈಲಿನಲ್ಲಿದ್ದರೆ, ಪುತ್ರ ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮತ್ತೋರ್ವ ಪುತ್ರ ಮೌನಕ್ಕೆ ಶರಣಾಗಿದ್ದಾರೆ. ಇದನ್ನೂ ಓದಿ: ಪೆನ್‌ಡ್ರೈವ್ ಕೇಸ್; ಕಾರ್ತಿಕ್, ದೇವರಾಜೇಗೌಡಗೆ ಎಸ್‌ಐಟಿ ನೋಟಿಸ್
ತಂದೆ-ತಾಯಿ ಹಾಗೂ ಸಹೋದರನಿಗೆ ಯಾರು ಊಹಿಸಲಾಗದ ಸಮಸ್ಯೆ ಎದುರಾಗಿದ್ದರೂ ಸೂರಜ್ ರೇವಣ್ಣ ಮಾತ್ರ ತೋಟದ ಮನೆ ಸೇರಿದ್ದಾರೆ. ತಮ್ಮ ಕುಟುಂಬಕ್ಕೆ ಎದುರಾಗಿರುವ ಸಂಕಷ್ಟದಿಂದ ಕಂಗಾಲಾಗಿರುವ ಸೂರಜ್ ರೇವಣ್ಣ ಮುಂದೇನು ಎಂಬ ಯೋಚನೆಯಲ್ಲಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನ ಜಿಲ್ಲೆಯ ಜೆಡಿಎಸ್‌ಗೆ ಬರಸಿಡಿಲು ಬಡಿದಂತಾಗಿದ್ದು, ತಮ್ಮ ನೆಚ್ಚಿನ ನಾಯಕರು ಜೈಲು ಸೇರಿರುವುದು ಎಲ್ಲರನ್ನು ಕಂಗೆಡಿಸಿದೆ. ಸದಾ ಚಟುವಟಿಕೆಯಿಂದ ಹೆಚ್.ಡಿ.ರೇವಣ್ಣ ಅವರನ್ನು ಕಂಡರೆ ಜಿಲ್ಲೆಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಇನ್ನಿಲ್ಲದ ಪ್ರೀತಿ ತೋರುತ್ತಿದ್ದರು. ಇದೀಗ ನಾಯಕನ ಆಸರೆ ಇಲ್ಲದೆ ದಿಕ್ಕಾಪಾಲಾಗಿದ್ದು ಆದಷ್ಟು ಬೇಗ ಜೈಲಿನಿಂದ ಬಿಡುಗಡೆ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಸಂಸತ್ರ ಮಹಿಳೆಯ ಕಿಡ್ನಾಪ್ ಪ್ರಕರಣ ಮಾಜಿಸಚಿವ ಹೆಚ್.ಡಿ.ರೇವಣ್ಣ ಜೊತೆಗೆ ಪತ್ನಿ ಭವಾನಿ ರೇವಣ್ಣರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಜಿಲ್ಲೆಯ ಜೆಡಿಎಸ್ ಪಾಳಯದಲ್ಲಿ ನೀರವ ಮೌನ ಆವರಿಸಿದ್ದು ಭವಾನಿ ರೇವಣ್ಣ ಅವರು ಬಂಧನವಾಗುತ್ತಾರಾ ಎಂಬ ಆತಂಕದಲ್ಲಿದ್ದಾರೆ.