ಬೆಂಗಳೂರು: ಶಿವಾಜಿನಗರ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸರ್ಕಾರ ಐಎಂಎ ಅಸ್ತ್ರ ಪ್ರಯೋಗಿಸಿತೇ ಎಂಬ ಪ್ರಶ್ನೆಯೊಂದು ರಾಜಕೀಯ ಅಂಗಳದಲ್ಲಿ ಹುಟ್ಟಿಕೊಂಡಿದೆ.
ಐಎಂಎ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಅವರ ಹೆಸರು ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ವಿಚಾರಣೆಗೆ ಹಾಜರಾಗಬೇಕೆಂದು ಎಸ್‍ಐಟಿ ನೋಟಿಸ್ ನೀಡಿದೆ. ರಾಜೀನಾಮೆ ನೋಟಿಸ್ ನೀಡಿದ್ದು ಸಾಕಷ್ಟು ಅನುಮಾನಗಳು ಮೂಡಿವೆ. ಈ ಹಿಂದೆ ಸಚಿವ ಜಮೀರ್ ಅಹ್ಮದ್ ಅವರಿಗೂ ಎಸ್‍ಐಟಿ ನೋಟಿಸ್ ನೀಡಿತ್ತು. ಎಸ್‍ಐಟಿ ನೋಟಿಸ್ ಪಡೆದ ಜಮೀರ್ ಅಹ್ಮದ್ ವಿಚಾರಣೆಗೆ ಹಾಜರಾಗಿದ್ದರು.
Advertisement
Advertisement
ಸ್ಪೀಕರ್ ರಮೇಶ್ ಕುಮಾರ್ ಕಚೇರಿಗೆ ತೆರಳಿದ ರೋಷನ್ ಬೇಗ್ ಅವರು ರಾಜೀನಾಮೆಯನ್ನು ಸಲ್ಲಿಸಿದರು. ರೋಷನ್ ಬೇಗ್ ರಾಜೀನಾಮೆ ಸಲ್ಲಿಸುವ ಸಮಯದಲ್ಲಿ ಸ್ಪೀಕರ್ ಕೊಠಡಿಯ ಒಳಗಡೆ ಕೃಷ್ಣಬೈರೇಗೌಡ ಮತ್ತು ಕೆಜೆ ಜಾರ್ಜ್ ಇದ್ದರು. ಲೋಕಸಭಾ ಚುನಾವಣೆಯ ನಂತರ ಬಹಿರಂಗವಾಗಿಯೇ ಸಿದ್ದರಾಮಯ್ಯ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದ್ದಕ್ಕೆ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ಸಿನಿಂದ ಉಚ್ಚಾಟಿಸಲಾಗಿತ್ತು.