ಮಂಗಳೂರು: ಧರ್ಮಸ್ಥಳದ (Dharmasthala) ಬಂಗ್ಲೆಗುಡ್ಡದ ರಹಸ್ಯ ಬೇಧಿಸಲು ಹೊರಟ ವಿಶೇಷ ತನಿಖಾ ತಂಡ (SIT) ಇಂದು 2ನೇ ದಿನದ ಶೋಧ ಕಾರ್ಯ ನಡೆಸಿದೆ. ನಿನ್ನೆಯ ಶೋಧ ವೇಳೆ 5 ತಲೆ ಬುರುಡೆ ಸೇರಿ ನೂರಾರು ಮೂಳೆಗಳು ಸಿಕ್ಕಿದ್ದು ಅದೆಲ್ಲವೂ ಪುರುಷರದ್ದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇಂದು ಕೂಡ ಬುರುಡೆ ಮತ್ತು ಅಸ್ಥಿಪಂಜರ (Skeleton) ಸಿಕ್ಕಿದ್ದು, ಇದರ ಜೊತೆಗೆ ಕೊಡಗು ಮೂಲದ ಯು.ಬಿ ಅಯ್ಯಪ್ಪ ಎಂಬುವವರಿಗೆ ಸೇರಿದ ಮಹತ್ವದ ದಾಖಲೆಗಳು ಪತ್ತೆಯಾಗಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಯು.ಬಿ ಅಯ್ಯಪ್ಪ ಎಂಬುವವರಿಗೆ ಐಡಿ ಕಾರ್ಡ್ (ID Card) ಹಾಗೂ ತ್ರಿಲೆಗ್ ಬ್ಯಾಲೆನ್ಸ್ ಸ್ಟಿಕ್ (ವಾಕಿಂಗ್ ಸ್ಟಿಕ್) ಬಂಗ್ಲೆಗುಡ್ಡದಲ್ಲಿ ಪತ್ತೆಯಾಗಿದೆ. 7 ವರ್ಷಗಳ ಹಿಂದೆ ಮೈಸೂರಿಗೆ ಚಿಕಿತ್ಸೆಗೆಂದು ತೆರಳಿದ್ದ ಅಯ್ಯಪ್ಪ ಅವರು ಬಳಿಕ ನಾಪತ್ತೆಯಾಗಿದ್ದಾರೆ ಎಂದು ಕುಟುಂಬಸ್ಥರು ಕುಟ್ಟ ಪೊಲೀಸ್ ಠಾಣೆಯಲ್ಲಿ (Kutta Police Station) ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದೀಗ ಬಂಗ್ಲೆಗುಡ್ಡದ ರಹಸ್ಯ ಕೆದಕಲು ಹೊರಟಿದ್ದ ಎಸ್‌ಐಟಿಗೆ ಅಯ್ಯಪ್ಪ ಅವರ ಐಡಿ ಕಾರ್ಡ್ ಹಾಗೂ ವಾಕಿಂಗ್‌ಸ್ಟಿಕ್‌ಗಳು ಸಿಕ್ಕಿದ್ದು, ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. ಕುಟುಂಬಸ್ಥರು ದಾಖಲಿಸಿದ್ದ ಮಿಸ್ಸಿಂಗ್ ಕಂಪ್ಲೆಂಟ್‌ನಲ್ಲಿ ವಾಕಿ ಸ್ಟಿಕ್ ಬಗ್ಗೆ ಉಲ್ಲೇಖ ಮಾಡಲಾಗಿದೆ ಎಂದು ಎಸ್‌ಐಟಿ ಮೂಲಗಳಿಂದ ತಿಳಿದುಬಂದಿದೆ.
ಈ ನಡುವೆ ತಲೆಬುರುಡೆ ತಂದಿದ್ದ ವಿಠಲ ಗೌಡ ವಿರುದ್ಧ ಎಸ್‌ಐಟಿಗೆ ಧರ್ಮಸ್ಥಳ ಗ್ರಾಮಸ್ಥರೊಬ್ಬರು ದೂರು ನೀಡಿದ್ದಾರೆ. ಇನ್ನೊಂದೆಡೆ ಎಸ್‌ಐಟಿ ಅಧಿಕಾರಿಗಳು ಆರೋಪಿ ಚಿನ್ನಯ್ಯನನ್ನು ಬೆಳ್ತಂಗಡಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತಲೆ ಬುರುಡೆ ತಂದ ವಿಠಲ ಗೌಡ ವಿರುದ್ದ ದೂರು
ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣದಲ್ಲಿ ತಲೆ ಬುರುಡೆ ತಂದಿದ್ದ ಸೌಜನ್ಯಳ ಮಾವ ವಿಠಲಗೌಡನನ್ನು ಎರಡು ಬಾರಿ ಬಂಗ್ಲೆಗುಡ್ಡಕ್ಕೆ ಕರೆತಂದ ಎಸ್‌ಐಟಿ ಅಧಿಕಾರಿಗಳು ಮಹಜರು ನಡೆಸಿದ್ದರು. ಮಹಜರು ನಡೆದ ಬಳಿಕ ವಿಠಲ ಗೌಡ ಬಂಗ್ಲೆಗುಡ್ಡದಲ್ಲಿ ಹತ್ತಾರು ಅಸ್ಥಿಪಂಜರಗಳನ್ನ ನೋಡಿದ್ದೇನೆಂದು ವೀಡಿಯೋ ಮಾಡಿ ಹೇಳಿಕೆ ನೀಡಿದ್ದ. ಇದಾದ ಬಳಿಕ ಬಂಗ್ಲೆಗುಡ್ಡದಲ್ಲಿ (Banglegudde) ಏನೋ ರಹಸ್ಯ ಅಡಗಿದೆ ಎಂದು ಎಲ್ಲೆಡೆ ಸುದ್ದಿ ಹಬ್ಬಿತ್ತು. ಈ ರಹಸ್ಯ ಬೇಧಿಸಲು ನಿರ್ಧರಿಸಿದ ಎಸ್‌ಐಟಿ 13 ಎಕರೆ ವಿಸ್ತೀರ್ಣದಲ್ಲಿರುವ ಇಡೀ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಸರ್ಚ್ ನಡೆಸಲು ತೀರ್ಮಾನಿಸಿದ್ದರು. ಅದರಂತೆ ನಿನ್ನೆ ದಿನಪೂರ್ತಿ ಶೋಧ ನಡೆಸಿದ್ದ ವೇಳೆ ಐದು ಕಡೆಗಳಲ್ಲಿ ಭೂಮಿಯ ಮೇಲ್ಭಾಗದಲ್ಲಿ ಹರಡಿಕೊಂಡಿದ್ದ ಐದು ತಲೆ ಬುರುಡೆ ಹಾಗೂ ನೂರಕ್ಕೂ ಅಧಿಕ ಮೂಳೆಗಳು ಪತ್ತೆಯಾಗಿದೆ. ಎಲ್ಲವನ್ನ ವಶಕ್ಕೆ ಪಡೆದು ಮಹಜರು ನಡೆಸಿದ ಎಸ್‌ಐಟಿ ಅಧಿಕಾರಿಗಳು ಎಲ್ಲವನ್ನ ಎಫ್‌ಎಸ್‌ಎಲ್ ಗೆ ಕಳುಹಿಸಿಕೊಟ್ಟಿದ್ದಾರೆ. ಮಹಜರು ವೇಳೆ ಸ್ಥಳದಲ್ಲಿದ್ದ ತಜ್ಞ ವೈದ್ಯರು ಎಲ್ಲವೂ ಪುರುಷರ ತಲೆ ಬುರುಡೆ ಹಾಗೂ ಮೂಳೆಗಳು ಎಂದು ಮೇಲ್ನೋಟಕ್ಕೆ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಅದೇ ಸ್ಥಳದ ಮರವೊಂದರಲ್ಲಿ ಎರಡು ಹಗ್ಗ ಒಂದು ಸೀರೆ ನೇತಾಡುವ ಸ್ಥಿತಿಯಲ್ಲಿದ್ದು ಅದರ ಅಡಿಭಾಗದ ಭೂಮಿಯ ಮೇಲ್ಭಾಗದಲ್ಲೇ ಕಳೇಬರ ಪತ್ತೆಯಾಗಿದೆ. ಹೀಗಾಗಿ ಇದು ಆತ್ಮಹತ್ಯೆ ಮಾಡಿಕೊಂಡವರ ಕಳೇಬರ ಎಂದು ಎಸ್‌ಐಟಿ ಅಭಿಪ್ರಾಯಪಟ್ಟಿದೆ.
ಸೌಜನ್ಯಳ ಮಾವ ವಿಠಲ ಗೌಡ, ತಲೆ ಬುರುಡೆ ತಂದ ಹಿನ್ನಲೆಯಲ್ಲಿ ಮಹಜರು ನಡೆಸಿದ್ದರಿಂದ ಬಂಗ್ಲೆಗುಡ್ಡ ಅರಣ್ಯದಲ್ಲಿ ಈ ಅಸ್ಥಿಪಂಜರಗಳೂ ಸಿಕ್ಕಿದೆ. ಈ ನಡುವೆ ಇದೇ ವಿಠಲ ಗೌಡ ವಿರುದ್ಧ ಎಸ್‌ಐಟಿಯಲ್ಲಿ ದೂರೊಂದು ದಾಖಲಾಗಿದೆ. ವಿಠಲಗೌಡ ಮಹಜರು ನಡೆಸಿದ ಬಳಿಕ ಎಸ್‌ಐಟಿ ತನಿಖೆ ಬಗ್ಗೆ ವೀಡಿಯೋ ಮಾಡಿ ಹೇಳಿಕೆ ನೀಡಿ ತನಿಖೆಯ ಹಾದಿತಪ್ಪಿಸಲು ಹಾಗೂ ಸಾಕ್ಷ್ಯ ನಾಶ ಮಾಡಲು ಸಾರ್ವಜನಿಕವಾಗಿ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಧರ್ಮಸ್ಥಳದ ಗ್ರಾಮಸ್ಥ ಸಂದೀಪ್ ರೈ ಎಂಬವರು ಬೆಳ್ತಂಗಡಿಯಲ್ಲಿರೋ ಎಸ್‌ಐಟಿ ಕಚೇರಿಗೆ ದೂರು ನೀಡಿದ್ದು, ತನಿಖಾ ಹಂತದಲ್ಲಿ ವಿಠಲ ಗೌಡನಿಂದ ಎಸ್‌ಐಟಿ ತನಿಖೆ ದಾರಿ ತಪ್ಪಿಸೋ ಪ್ರಯತ್ನ ನಡೆದಿದೆ. ಎಸ್‌ಐಟಿ ಯಾವುದೇ ಮಾಹಿತಿ ನೀಡದೇ ಇದ್ದರೂ ವಿಠಲ ಗೌಡ ವಿಡಿಯೋ ಹರಿ ಬಿಟ್ಟು ತನಿಖೆ ಹಾದಿ ತಪ್ಪಿಸಿದ್ದಾನೆ. ವಿಠಲ ಗೌಡ ಹಿಂದೆ ಕೆಲ ವ್ಯಕ್ತಿಗಳು ಸೇರಿಕೊಂಡು ಷಡ್ಯಂತ್ರ ಮಾಡಿದ್ದಾರೆ. ಹೀಗಾಗಿ ವಿಠಲ ಗೌಡ ವಿರುದ್ದ ತನಿಖೆ ನಡೆಸುವಂತೆ ಎಸ್‌ಐಟಿಗೆ ದೂರು ನೀಡಲಾಗಿದೆ. ಎಸ್‌ಐಟಿ ಅಧಿಕಾರಿಗಳು ದೂರು ಸ್ವೀಕರಿಸಿ ಸ್ವೀಕೃತಿ ನೀಡಿದ್ದಾರೆ.
ಕೋರ್ಟ್‌ನಲ್ಲಿ ಚಿನ್ನಯ್ಯನ ವಿಚಾರಣೆ
ಈ ನಡುವೆ ಶವ ಹೂತಿಟ್ಟ ಪ್ರಕರಣದ ಆರೋಪಿ ಚಿನ್ನಯ್ಯನನ್ನು ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶರ ಮುಂದೆ ಈ ಹಿಂದೆ ನೀಡಿದ್ದ ಹೇಳಿಕೆಗೆ ಹೆಚ್ಚುವರಿ ಹೇಳಿಕೆ ಸೇರ್ಪಡೆ ಪ್ರಕ್ರಿಯೆಯನ್ನು ಮಾಡಲಾಗಿದೆ. ಕಳೆದ ಸೆ.6ರಂದು ಬೆಳ್ತಂಗಡಿ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಶಿವಮೊಗ್ಗ ಜೈಲಿಗೆ ಕಳಿಸಲಾಗಿದೆ. ಇಂದು ಅಲ್ಲಿಂದ ಕರೆತಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಒಟ್ಟಿನಲ್ಲಿ ಈ ಬುರುಡೆ ಪ್ರಕರಣ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆಯುತ್ತಿದ್ದು, ಇನ್ನೇನು ಆಗುತ್ತೆ ಅನ್ನೋ ಕುತೂಹಲ ಎಲ್ಲರಲ್ಲಿದೆ.