ಬೆಂಗಳೂರು: ಐಎಂಎ ವಂಚನೆ ಪ್ರಕರಣದ ಸಂಬಂಧ ಬಿಬಿಎಂಪಿ ಪಾಲಿಕೆಯ ಸದಸ್ಯರೊಬ್ಬರ ಪತಿಯನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ಅಧಿಕಾರಿಗಳು ಬಂಧಿಸಿದ್ದಾರೆ.
ಶಿವಾಜಿನಗರದ ಕಾರ್ಪೋರೇಟರ್ ಪರೀಧಾ ಅವರ ಪತಿ ಇಸ್ತಿಯಾಕ್ ಅಹಮದ್ ಬಂಧಿತ ಆರೋಪಿ. ಇಸ್ತಿಯಾಕ್ ಅಹಮದ್ ಶಿವಾಜಿನಗರದ ರೌಡಿಶೀಟರ್ ಹಾಗೂ ಶಾಸಕ ರೋಷನ್ ಬೇಗ್ ಆಪ್ತನಾಗಿದ್ದ. ಐಎಂಎ ಕಂಪನಿ ಮಾಲೀಕ ಮನ್ಸೂರ್ ಖಾನ್‍ನಿಂದ ಎರಡು ಕೋಟಿ ರೂ. ಪಡೆದಿದ್ದ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಆರೋಪಿಯನ್ನು ಬಂಧಿಸಿದ ಎಸ್‍ಐಟಿ ಅಧಿಕಾರಿಗಳು, ತೀವ್ರ ವಿಚಾರಣೆಗೆ ಒಳಪಡಿಸಿದ್ದರು.
ಎಸ್‍ಐಟಿ ಅಧಿಕಾರಿಗಳು ಕಳೆದ ನಾಲ್ಕು ದಿನಗಳಿಂದ ಇಸ್ತಿಯಾಕ್ ಅಹಮದ್‍ನನ್ನು ವಿಚಾರಣೆಗೆ ಒಳಪಡಿಸಿದ್ದರು. ಇದರಿಂದಾಗಿ ಆರೋಪಿ, ತಾನು ಮನ್ಸೂರ್ ಖಾನ್‍ನಿಂದ 2 ಕೋಟಿ ರೂ. ಹಣ ಪಡೆದಿದ್ದೆ ಎಂದು ಒಪ್ಪಿಕೊಂಡಿದ್ದಾನೆ.
ಈ ಪ್ರಕರಣದ ಮುಖ್ಯ ಆರೋಪಿ, ಐಎಂಎ ಮಾಲೀಕ ಮನ್ಸೂರ್ ಖಾನ್, ಬೆಂಗಳೂರು ಜಿಲ್ಲಾಧಿಕಾರಿ ವಿಜಯಶಂಕರ್, ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಸೇರಿದಂತೆ ಅನೇಕರನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಮನ್ಸೂರ್ ಖಾನ್ ಜಾರಿ ನಿರ್ದೇಶನಾಲಯದ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ. ವಿಚಾರಣೆ ವೇಳೆ 15 ರಾಜಕೀಯ ನಾಯಕರ ಹೆಸರನ್ನು ಮನ್ಸೂರ್ ಹೇಳಿದ್ದ ಎಂದು ಮೂಲಗಳು ತಿಳಿಸಿದ್ದವು.