ಕಾರವಾರ: ಪಶ್ಚಿಮಘಟ್ಟದ ಕಾಡು ಹಣ್ಣುಗಳನ್ನು ಜನರಿಗೆ ಪರಿಚಯಿಸುವ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಅರಣ್ಯ ಮಹಾವಿದ್ಯಾಲಯವು ಕಾಡುಹಣ್ಣುಗಳ ಒಂದು ದಿನದ ಪ್ರದರ್ಶನವನ್ನು ಏರ್ಪಡಿಸಿತ್ತು.
ಪಶ್ಚಿಮಘಟ್ಟದ ಕಾಡುಗಳಲ್ಲಿ 170 ಜಾತಿಯ ವಿವಿಧ ಹಣ್ಣುಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 130 ಜಾತಿಯ ಕಾಡು ಹಣ್ಣುಗಳು ಉತ್ತರಕನ್ನಡ ಜಿಲ್ಲೆಯಲ್ಲಿದ್ದು, ಸುಮಾರು 100 ಕ್ಕೂ ಹೆಚ್ಚು ಹಣ್ಣುಗಳು ಹಾಗೂ ಸಸಿಗಳನ್ನು ಶಿರಸಿಯ ಅರಣ್ಯ ಮಹಾವಿದ್ಯಾಲಯದ ಆವರಣದಲ್ಲಿ ಪ್ರದರ್ಶನ ಮಾಡಲಾಯ್ತು.
Advertisement
ಕಾಡು ಹಣ್ಣುಗಳಾದ ಬೇಲ, ಅಂಕೋಲೆ, ಅಲೆಹಣ್ಣು, ಉಪ್ಪಾಗೆ, ಇಳ್ಳಿಹೊಳೆತುಮರಿ, ರಾಮಪತ್ರೆಗಳಂತಹ ವಿಶೇಷ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇದಲ್ಲದೇ ಸ್ಥಳೀಯವಾಗಿ ಸಿಗುವ ನೇರಳೆ, ಕೆಂಪುಮುರುಗಲ, ದ್ಯಾವಣಗಿ, ಅತ್ತಿ, ಅನಲೆಕಾಯಿ, ಕುಂಟು ನೇರಲೆ, ಬಿಳಿಸೂಲಿ, ನೀರ ಸೇಬು ಸೇರಿದಂತೆ 50 ಕ್ಕೂ ಹೆಚ್ಚು ಹಣ್ಣುಗಳನ್ನು ಪ್ರದರ್ಶಿಸಲಾಯಿತು. ಇನ್ನು ಕೇವಲ ಪ್ರದರ್ಶನವಲ್ಲದೇ ಮಾಹಿತಿಯನ್ನು ಕೂಡ ಆಗಮಿಸಿದ ಜನರಿಗೆ ನೀಡಿದ್ದಾರೆ.